ಇಂದು ಪರಿಷತ್ ಉಪ ಚುನಾವಣೆ
ಹುಬ್ಬಳ್ಳಿ: ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಗೆ ಉಳಿದಿರುವುದು ಕ್ಷಣಗಣನೆ ಮಾತ್ರ.
ಅವಿಭಜಿತ ಧಾರವಾಡ ಜಿಲ್ಲೆಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ಈ ಉಪ ಚುನಾವಣೆ, ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರಿಗೆ ರಾಜ್ಯ ರಾಜಕೀಯದಲ್ಲಿ ನೆಲೆ ಒದಗಿಸಲು ಅತ್ಯಂತ ಮಹತ್ವದ್ದು.
ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಹಾಗೂ ಬಿಜೆಪಿಯ ಪ್ರದೀಪ ಶೆಟ್ಟರ ಅವರಿಬ್ಬರೂ ತಮ್ಮ ತಮ್ಮ ಪಕ್ಷಗಳಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರಾದರೂ, ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಇದೇ ಮೊದಲು.
ಹಗಲಿರುಳು ದುಡಿದಿದ್ದಾರೆ: ಇದುವರೆಗೆ ಜಿಲ್ಲೆಯಲ್ಲಿ ನಡೆದಿರುವ ಪಂಚಾಯಿತಿ, ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಚುನಾವಣೆಗಳಲ್ಲಿ ಪ್ರದೀಪ ಶೆಟ್ಟರ್ ಹಾಗೂ ನಾಗರಾಜ ಛಬ್ಬಿ ಅವರಿಬ್ಬರೂ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ದುಡಿದವರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ನಾಗರಾಜ ಛಬ್ಬಿ ಕೊನೆ ಘಳಿಗೆಯಲ್ಲಿ ವಂಚಿತರಾಗಿದ್ದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ತಮ್ಮ ಸಹೋದರ ಪ್ರದೀಪ ಶೆಟ್ಟರ್ ಅವರನ್ನು ಗೆಲ್ಲಿಸುವುದು ಪ್ರತಿಷ್ಠೆಯಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಗೆಲುವು ಆ ಪಕ್ಷದ ಮುಖಂಡರಿಗೆ ಸವಾಲಾಗಿದೆ.
ವಿಧಾನ ಪರಿಷತ್ ಉಪ ಚುನಾವಣೆ ಘೋಷಣೆಗೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಂಡ ನಂತರ ಎರಡೂ ಪಕ್ಷಗಳ ಮುಖಂಡರು ಧಾರವಾಡ, ಗದಗ ಹಾವೇರಿ ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ಪ್ರವಾಸ ಮಾಡಿ, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಮತ ನೀಡುವಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಈ ಮಧ್ಯೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿರುವ ಕೆಜೆಪಿ ಹಾಗೂ ಜೆಡಿಎಸ್ನ ಸಹಕಾರದಿಂದಾಗಿ ಬಿಜೆಪಿ ಮುಖಂಡರು ಚುನಾವಣೆಗೆ ಮುಂಚೆಯೇ ಗೆಲುವಿನ ನಗೆ ಬೀರುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಹಾಗೂ ಕೆಜೆಪಿ ಒಡ್ಡಿರುವ ಸವಾಲನ್ನು ಸ್ವೀಕರಿಸಿರುವ ಕಾಂಗ್ರೆಸ್ ಮುಖಂಡರು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರತಿಪಕ್ಷಗಳಿಗೆ ತಕ್ಕ ಪಾಠ ಕಲಿಸುವ ತವಕದಲ್ಲಿದ್ದಾರೆ.
ಮತಗಟ್ಟೆಗಳ ವಿವರ: ಧಾರವಾಡದಲ್ಲಿ 134, ಹಾವೇರಿಯಲ್ಲಿ 216 ಹಾಗೂ ಗದಗನಲ್ಲಿ 115 ಸೇರಿದಂತೆ ಒಟ್ಟು 465 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 207 ಸೂಕ್ಷ್ಮ ಮತ್ತು 258 ಸಾಮಾನ್ಯ ಮತಗಟ್ಟೆಗಳು. ಒಟ್ಟು 7316 ಮತದಾರರಿದ್ದು, ಸ್ಥಳೀಯ ಸಂಸ್ಥೆಗಳಾದ ಗ್ರಾಪಂ, ತಾಪಂ, ಜಿಪಂ, ಪುರಸಭೆ, ನಗರ ಸಭೆ, ಪಪಂ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಮತ ಚಲಾಯಿಸಲಿದ್ದಾರೆ. ಒಟ್ಟು 1,082 ಅಧಿಕಾರಿಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದ್ದು, ಈ ಪೈಕಿ ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿಗಳೆಂದು 465 ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. 4 ರಿಂದ 5 ಮತಗಟ್ಟೆಗಳಿಗೆ ಒಬ್ಬ ನೋಡಲ್ ಅಧಿಕಾರಿಯಂತೆ 68 ಅಧಿಕಾರಿಗಳನ್ನು ನೇಮಿಸಿದ್ದು, ಎಲ್ಲ ಮತಗಟ್ಟೆಗಳಿಗೂ ಮತದಾರರನ್ನು ಗುರುತಿಸಲು ಗುರುತಿನ ಅಧಿಕಾರಿ (ಉದಾ-ಗ್ರಾಪಂ ಸದಸ್ಯರನ್ನು ಗುರುತು ಹಿಡಿಯಲು ಗ್ರಾಪಂ ಕಾರ್ಯದರ್ಶಿ ಅಥವಾ ಪಿಡಿಓ ನೇಮಕ) ನೇಮಿಸಲಾಗಿದೆ.
ಆ. 22ರಂದು ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಮತದಾನದ ವೇಳೆ ಮತಗಟ್ಟೆ ಸುತ್ತಮುತ್ತಲಿನ 200 ಮೀಟರ್ 144ನೇ ಕಲಂ ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮತದಾನದ ನಂತರ ಮತಪೆಟ್ಟಿಗೆಗಳನ್ನು ಮತ ಎಣಿಕೆ ಸ್ಥಳವಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸ್ಟ್ರಾಂಗ್ ರೂಂಗೆ ತರಲಾಗುವುದು. ಮತ ಎಣಿಕೆ ನಡೆಯುವ ಆ. 26ರಂದು ಬೆಳಿಗ್ಗೆ ವರೆಗೂ ನಿರಂತರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕೇಂದ್ರದಲ್ಲಿ ಇರುತ್ತಾರೆ.