ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಾಲಿಕೆ ಚುಕ್ಕಾಣಿ ಯಾರ ಪಾಲಿಗೆ?

Lingaraj Badiger
Updated On : 23 Aug 2013, 12:38 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 22
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗ ಮತ್ತು ಉಪ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆಗೆ ಗುರುವಾರ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ತುರುಸು ಪಡೆದುಕೊಂಡಿವೆ.
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಉಪ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಪ್ರಕಟಗೊಂಡ ಮೀಸಲಾತಿಯಿಂದಾಗಿ ಅವಳಿ ನಗರದ ರಾಜಕೀಯ ಚಟುವಟಿಕೆಗೆ ಮತ್ತಷ್ಟು ವೇಗ ದೊರೆತಿದೆ.
ಗುರುವಾರ ಪೂರ್ಣಗೊಂಡಿರುವ ವಿಧಾನ ಪರಿಷತ್ ಉಪ ಚುನಾವಣೆಯ ಫಲಿತಾಂಶ ಆ. 26ರಂದು ಪ್ರಕಟಗೊಳ್ಳಲಿದ್ದು, ಈ ಚುನಾವಣೆಯ ಫಲಿತಾಂಶ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯುವ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಆ. 26ರ ನಂತರವೇ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾಗಿದ್ದರಿಂದ ಸದಸ್ಯರ ಕುದುರೆ ವ್ಯಾಪಾರಕ್ಕೆ ಸಾಕಷ್ಟು ಸಮಯಾವಕಾಶ ದೊರೆತಂತಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯುವುದು ಪ್ರತಿಷ್ಠೆಯ ಪ್ರಶ್ನೆ.  ಸಂಖ್ಯಾಬಲದಲ್ಲಿ ಕೂದಲೆಳೆಯ ಅಂತರದ ವ್ಯತ್ಯಾಸದಲ್ಲಿರುವ ಎರಡೂ ಪಕ್ಷ, ಯಾವುದೇ ಸಂದರ್ಭದಲ್ಲಿ ಪಾಲಿಕೆಯ ಗದ್ದುಗೆ ಏರಬೇಕೆಂಬ ಪೈಪೋಟಿಯಲ್ಲಿ ತೊಡಗಿಕೊಂಡಿವೆ.
ಇನ್ನು ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿಗೊಂಡಿರುವ ಪ. ಪಂಗಡ ಮಹಿಳೆ ಬಿಜೆಪಿಯಲ್ಲಿಯೇ ಇರುವುದರಿಂದ ಅಧಿಕಾರಕ್ಕೆ ಯಾವುದೇ ಪಕ್ಷ ಬಂದರೂ ಉಪ ಮೇಯರ್ ಸ್ಥಾನ ಬಿಜೆಪಿಗೇ ಖಚಿತ. ವಾರ್ಡ್ ನಂ. 22ರ ಮಂಜುಳಾ ಅಕ್ಕೂರ ಅವರನ್ನು ಹೊರತುಪಡಿಸಿದರೆ ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾವ ಸದಸ್ಯರೂ ಪ. ಪಂಗಡ ಮಹಿಳೆ ಮೀಸಲಾತಿಗೆ ಸೇರಿಲ್ಲ. ಇದು ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್. ಸಾಮಾನ್ಯ ವರ್ಗಕ್ಕೆ ಮೀಸಲುಗೊಂಡಿರುವ ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಾಜಿ ಮೇಯರ್‌ಗಳಾದ ವಾರ್ಡ್ ನಂ. 33ರ ವೀರಣ್ಣ ಸವಡಿ, ವಾರ್ಡ್ ನಂ. 42ರ ಡಾ. ಪಾಂಡುರಂಗ ಪಾಟೀಲ, ಕಾಂಗ್ರೆಸ್‌ನ ವಾರ್ಡ್‌ನಂ. 7ರ ದೀಪಕ್ ಚಿಂಚೋರೆ, ವಾರ್ಡ್ ನಂ. 29ರ ಪಿ.ಕೆ. ರಾಯನಗೌಡ್ರ, ವಾರ್ಡ್ ನಂ. 40ರ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಹಾಗೂ ಜೆಡಿಎಸ್‌ನ ವಾರ್ಡ್ ನಂ. 25ರ ರಾಜಣ್ಣ ಕೊರವಿ ಸ್ಪರ್ಧೆಯಲ್ಲಿದ್ದಾರೆ.
ಆದರೆ, ಪಾಲಿಕೆಯಲ್ಲಿ ಅಧಿಕಾರದ ತಕ್ಕಡಿ ಹಿಡಿಯಲು 34 ಸದಸ್ಯರ ಸಂಖ್ಯಾಬಲದ ಆವಶ್ಯಕತೆ ಇರುವುದರಿಂದ ಹೆಚ್ಚು ಮತಗಳನ್ನು ಪಡೆಯುವ ಪಕ್ಷ ಮೇಯರ್ ಗದ್ದುಗೆ ಏರಲಿದೆ. ಬಹುಮತ ಪಡೆಯುವ ಪಕ್ಷದ ಅಭ್ಯರ್ಥಿಗಳು ಮೇಯರ್ ಗೌನ್ ಧರಿಸಲಿದ್ದಾರೆ.
ಸಂಖ್ಯಾಬಲದ ಲೆಕ್ಕಾಚಾರ: ಸದ್ಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 33, ಕಾಂಗ್ರೆಸ್‌ನ 22, ಜೆಡಿಎಸ್‌ನ 9, ಕೆಜೆಪಿಯ 1 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕೆಜೆಪಿಯು ಬಿಜೆಪಿಗೆ ಬೆಂಬಲ ನೀಡಿದರೆ ಬಿಜೆಪಿ ಬಲ 34ಕ್ಕೆ ಏರುತ್ತದೆ. ಜೊತೆಗೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳಲ್ಲಿ ಒಬ್ಬರು ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಆ ಪಕ್ಷದ ಬಲ 35ಕ್ಕೆ ತಲುಪಿದೆ. ಸಂಸದ ಪ್ರಹ್ಲಾದ ಜೋಶಿ, ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್, ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಮತಗಳಿಂದ ಬಿಜೆಪಿಯ ಬಲ 38ಕ್ಕೆ ಏರಲಿದೆ.
ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಬಲ 31ಕ್ಕೆ ಏರಲಿದ್ದು, ಒಬ್ಬ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ಆ ಪಕ್ಷದ ಸಂಖ್ಯಾಬಲ 32ಕ್ಕೆ ತಲುಪುವುದು. ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಮತಗಳು ಸೇರಿದರೆ ಕಾಂಗ್ರೆಸ್ ಬಲ 37ಕ್ಕೆ ತಲುಪುವುದು.
ಇದುವರೆಗೆ ಯಾವುದೇ ಪಕ್ಷಕ್ಕೆ ಬೆಂಬಲ ಘೋಷಿಸದ ಪಕ್ಷೇತರ ಸದಸ್ಯನನ್ನು ಸೆಳೆಯಲು ಕಾಂಗ್ರೆಸ್-ಬಿಜೆಪಿಗಳೆರಡೂ ಪೈಪೋಟಿಗೆ ಇಳಿದಿದ್ದು, ಈ ಪಕ್ಷೇತರ ಸದಸ್ಯ ಬಿಜೆಪಿಗೆ ಹೋದಲ್ಲಿ ಅದರ ಬಲ 39ಕ್ಕೆ ಏರಿ, ಕಾಂಗ್ರೆಸ್ ಬಲ 36ಕ್ಕೆ ಕುಗ್ಗುವುದು. ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ಕಾಂಗ್ರೆಸ್ ಬಲ 37ಕ್ಕೆ ತಲುಪಿ, ಬಿಜೆಪಿ ಬಲ 38 ತಲುಪುವುದು.
ಉಪ ಚುನಾವಣೆ: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಗೆಲವು ಸಾಧಿಸಿದಲ್ಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಲ ಒಬ್ಬನೇ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ 39ಕ್ಕೆ ಏರುವುದು ಹಾಗೂ ಕಾಂಗ್ರೆಸ್ 37 ಸದಸ್ಯರ ಬಲ ಪಡೆದುಕೊಳ್ಳುವುದು. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಜಯ ಪಡೆದಲ್ಲಿ ಒಬ್ಬ ಪಕ್ಷೇತರ ಸದಸ್ಯನ ಬೆಂಬಲದೊಂದಿಗೆ ಆ ಪಕ್ಷ 38ರ ಸಂಖ್ಯಾಬಲ ತಲುಪುವುದು.
ಆಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡರ ಬಲಾಬಲ 38ಕ್ಕೆ ನಿಲ್ಲುವುದು. ಈ ಸಂದರ್ಭದಲ್ಲಾಗುವ ಗೊಂದಲಗಳನ್ನು ನಿವಾರಿಸಿ ಸ್ಪಷ್ಟ ಬಹುಮತ ಪಡೆದುಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಉಳಿದಿರುವ ಒಬ್ಬ ಪಕ್ಷೇತರ ಸದಸ್ಯನನ್ನು ಸೆಳೆಯಲು ಭಾರಿ ಪೈಪೋಟಿ ನಡೆಸಿವೆ.
ಜೊತೆಗೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕಾರಿಯಾಗಲಿರುವ ಅವಿಭಜಿತ ಧಾರವಾಡ ಜಿಲ್ಲೆಯಿಂದ ನಡೆದಿರುವ ವಿಧಾನ ಪರಿಷತ್ ಉಪ ಚುನಾವಣೆ ಫಲಿತಾಂಶದ ಮೇಲೂ ಕಣ್ಣಿಟ್ಟಿವೆ.

ಎಲ್ಲರೂ ಕಾಂಗ್ರೆಸ್‌ಗೆ ಸಹಕಾರ ನೀಡುತ್ತಾರೆ
ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ಜೆಡಿಎಸ್ ಸಹಕಾರ ಅಗತ್ಯ. ಜಾತ್ಯತೀತ ನಿಲುವಿನಲ್ಲಿ ನಂಬಿಕೆ ಇಟ್ಟು ಗೆದ್ದಿರುವ ಎಲ್ಲರೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆಂಬ ನಂಬಿಕೆ ಇದೆ. ಸಹಕಾರಕ್ಕೆ ಕೋರಿ ಜೆಡಿಎಸ್ ಸದಸ್ಯರೊಂದಿಗೆ ಮಾತುಕತೆ ನಡೆಸಲಾಗುವುದು. ಜೊತೆಗೆ ಪಕ್ಷೇತರ ಸದಸ್ಯರೊಂದಿಗೂ ಚರ್ಚಿಸಲಾಗುವುದು. ವಿಧಾನ ಪರಿಷತ್ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಬಂದಲ್ಲಿ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮತ್ತಷ್ಟು ಸಹಕಾರಿಯಾಗಲಿದೆ.
-ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ

ಬಿಜೆಪಿಗೆ ಅಧಿಕಾರ ನಿಶ್ಚಿತ
ಹು-ಧಾ ಮಹಾನಗರ ಪಾಲಿಕೆಯಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಂಖ್ಯಾಬಲದಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಿರುವುದರಿಂದ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬರುವುದರಲ್ಲಿ ಶಂಕೆಯೇ ಇಲ್ಲ. ಈಗಾಗಲೇ ಒಬ್ಬರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ಘೋಷಿಸಿದ್ದು, ಕೆಜೆಪಿ ಹಾಗೂ ಮತ್ತೊಬ್ಬ ಪಕ್ಷೇತರ ಸದಸ್ಯರೊಂದಿಗೆ ಮಾತುಕತೆ ನಡೆಸಲಾಗುವುದು.
-ಪ್ರಹ್ಲಾದ ಜೋಶಿ
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ

- ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement