10:30ಕ್ಕೆ ಮದ್ಯದಂಗಡಿ ಬಂದ್: ಕಮಿಷನರ್
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪರವಾನಗಿ ಪಡೆದ ಅಂಗಡಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಅಂಗಡಿಗಳು ತಮ್ಮ ವಹಿವಾಟನ್ನು ರಾತ್ರಿ 10:30ಕ್ಕೆ ಸ್ಥಗಿತಗೊಳಿಸಬೇಕು ಎಂದು ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಆದೇಶ ಹೊರಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ತಮ್ಮ ಅಂಗಡಿಗಳು ಯಾವ ಕಾರಣಕ್ಕೆ ನಿಗದಿತ ಸಮಯ ಮೀರಿ ತೆರೆದಿರಬೇಕಾದ ಅಗತ್ಯವಿದೆ ಎನ್ನುವ ಸಂಗತಿಯನ್ನು ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಲು ಅವಕಾಶವಿದೆ. ಈ ಆದೇಶಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ವ್ಯಾಪಾರಿಗಳು ಅಧಿಸೂಚನೆ ಹೊರಡಿಸಿದ ದಿನದಿಂದ 30ದಿನಗಳೊಳಗೆ ಅಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ 'ಹುಚ್ಚರ ಸಂತೆ' ನಾಟಕ ಪ್ರದರ್ಶನ
ಧಾರವಾಡ: ವಿದ್ಯಾವರ್ಧಕ ಸಂಘದಲ್ಲಿ ಆ. 25ರ ಭಾನುವಾರ ಸಂಜೆ 6ಕ್ಕೆ ಗುಲಾಬಿ ಸ್ವಯಂ ಸೇವಾ ಸಂಸ್ಥೆ ಹಾಗೂ ಟೂರಿಂಗ್ ಟಾಕೀಸ್ ಜಂಟಿಯಾಗಿ ಹುಚ್ಚರ ಸಂತೆ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿವೆ. ಕಲಾವಿದರ ಪ್ರೋತ್ಸಾಹಕ್ಕಾಗಿ ರು. 15 ಪ್ರವೇಶ ಧನ ನಿಗದಿಪಡಿಸಿದ್ದು, ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಮಹಿಳೆಯ ಹೆಸರಿನಲ್ಲಿ ಅಶ್ಲೀಲ ಸಂದೇಶ: ದೂರು
ಹುಬ್ಬಳ್ಳಿ: ಬೆಂಗಳೂರು ಮೂಲದ ಮಹಿಳೆಯೊಬ್ಬರ ಈಮೇಲ್ ಮತ್ತು ಫೇಸ್ಬುಕ್ ಪಾಸ್ವರ್ಡ್ ಹ್ಯಾಕ್ ಮಾಡಿದ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬ ಮಹಿಳೆಯ ಹೆಸರಿನಲ್ಲಿ ಅಶ್ಲೀಲ ಚಿತ್ರ ಮತ್ತು ಸಂದೇಶ ಕಳುಹಿಸಿದ ಕುರಿತು ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರು ಮೂಲದ ಪ್ರತಿಮಾ ನಟರಾಜ್ ಶೇಖ್ ಎಂಬ ಮಹಿಳೆಯ ಇಮೇಲ್ ಮತ್ತು ಫೇಸ್ಬುಕ್ ಪಾಸ್ವರ್ಡ್ಗಳನ್ನು ಕಳ್ಳತನ ಮಾಡಿದ್ದ ಹುಬ್ಬಳ್ಳಿಯ ಬಸವರಾಜ ಗುರುಸಿದ್ಧ ಅಕ್ಕಿ, ಮಹಿಳೆಯ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಅಶ್ಲೀಲ ಚಿತ್ರ ಮತ್ತು ಸಂದೇಶಗಳನ್ನು ಕಳುಹಿಸಿ, ನನ್ನೊಂದಿಗೆ ಮಾತನಾಡದಿದ್ದರೆ ಮತ್ತೆ ನಿನ್ನ ಹೆಸರಿನಲ್ಲಿ ನಿಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಅಶ್ಲೀಲ ಚಿತ್ರ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಲಿತಾ ಕಾರಂತ ನಿಧನ
ಧಾರವಾಡ: ಇಲ್ಲಿಯ ಯಾಲಕ್ಕಿ ಶೆಟ್ಟರ್ ಕಾಲನಿ ನಿವಾಸಿ ಲಲಿತಾ ಎಸ್. ಕಾರಂತ (90) ಗುರುವಾರ ನಿಧನರಾದರು. ಮೃತರಿಗೆ ಜಿಲ್ಲಾ ಸರ್ಕಾರಿ ವಕೀಲ ಶ್ಯಾಮಸುಂದರ ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ.
--