ಜಿಮ್‌ಖಾನಾ ಮೈದಾನ ಹೋರಾಟಕ್ಕೆ ಕೈ ಬೆಂಬಲ
ಹುಬ್ಬಳ್ಳಿ: ಜಿಮ್‌ಖಾನಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿರುದ್ಧ ಗ್ರೌಂಡ್ ಬಚಾವೋ ಸಮಿತಿ ಹಮ್ಮಿಕೊಂಡಿರುವ ಹೋರಾಟಕ್ಕೆ ಆಲ್‌ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸಮಿತಿ ಧಾರವಾಡ ಘಟಕ ತನ್ನ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಆಐಟಿಯುಸಿ, ಜಿಮಖಾನಾ ಮೈದಾನ ಹಸ್ತಾಂತರ ಸಂದರ್ಭ ಮಾಜಿ ಸಿಎಂ ಶೆಟ್ಟರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದುಕೊಂಡು ತಮಗೆ ಈ ಪ್ರಸ್ತಾವನೆ ಗಮನಕ್ಕೆ ಬಂದಿಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಮತ್ತು ತಹಸೀಲ್ದಾರ್ ಅವರ ಮುಖಾಂತರ ಸಲ್ಲಿಸಲ್ಪಟ್ಟ ಪ್ರಸ್ತಾವನೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. 2009ರಲ್ಲಿ ಜಿಮಖಾನಾ ಕ್ಲಬ್‌ಗೆ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರು 7.14 ಎಕರೆ ಜಮೀನನ್ನು ಹಸ್ತಾಂತರಿಸಿದ್ದಾರೆ. ನಂತರ ಅದೇ ಜಮೀನಿನಲ್ಲಿ ಕೈಗೆತ್ತಿಕೊಂಡಿರುವ ಚಟುವಟಿಕೆಗಳ ಕುರಿತು ಗೌರವಾಧ್ಯಕ್ಷರಾಗಿರುವ ತಮ್ಮ ಗಮನಕ್ಕೆ ಬಂದಿಲ್ಲ ಎಂದರೆ ಕುಚೋದ್ಯದ ಸಂಗತಿ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಬಿ.ಎ. ಮುಧೋಳ, ದೇವಾನಂದ ಜಗಾಪುರ, ಆರ್.ಎಫ್. ಕವಳಿಕಾಯಿ, ಎನ್.ಎ. ಖಾಜಿ, ಎ.ಎಸ್. ಫಿರಜಾದೆ ಮುಂತಾದವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.