ವಚನ ಸಂಗೀತ ಕ್ಷೇತ್ರಕ್ಕೂ ವಿಶೇಷ ಸ್ಥಾನಮಾನ ಬೇಕು
ಧಾರವಾಡ: ವಚನ ಸಂಗೀತ ಪ್ರಕಾರವು ಪ್ರಸ್ತುತ ಕನ್ನಡ ವೈಶಿಷ್ಟ್ಯತೆಯ ಸಂಗೀತ ಪ್ರಕಾರವಾಗಿ ಬೆಳೆದಿದೆ. ಅದಕ್ಕಾಗಿ ಈ ಸಂಗೀತ ಪ್ರಕಾರವನ್ನು ಪೋಷಿಸುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೂ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ನೀಡಬೇಕು ಎಂದು ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಹೇಳಿದರು.
ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸಮ್ಮಾನ ಪ್ರದಾನ ಹಾಗೂ ಸಂಗೀತೋತ್ಸವದಲ್ಲಿ ಮಾತನಾಡಿದ ಅವರು, ವಚನ ಸಂಗೀತ ಇದೀಗ ಅಪಾರ ಶೋತೃಗಣವನ್ನು ಹೊಂದುತ್ತಿದೆ. ಅಲ್ಲದೆ, ದೊಡ್ಡ ಸಂಗೀತ ಕಲಾ ಪ್ರಕಾರವಾಗಿ ಬೆಳೆದಿದ್ದು, ಈ ಕ್ಷೇತ್ರದ ಯುವಕರನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ವಚನ ಸಂಗೀತ ಕ್ಷೇತಕ್ಕೂ ವಿಶೇಷ ಸ್ಥಾನಮಾನ ನೀಡುವ ಮೂಲಕ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯವಾಗಬೇಕಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ಗುರುತಿಸಲಿ: ಪ್ರಸ್ತುತ ಎರಡ್ಮೂರು ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರುವ ವಚನ ಸಂಗೀತ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಮಹಾರಾಷ್ಟ್ರದಲ್ಲಿ ಯಾವುದೇ ಕಾರ್ಯಕ್ರಮವನ್ನು ರಂಗಗೀತೆ ಇಲ್ಲದೆ ಮುಗಿಸುವುದಿಲ್ಲವೋ, ಹಾಗೆಯೇ ಕರ್ನಾಟಕದಲ್ಲಿ ವಚನ ಸಂಗೀತವಿಲ್ಲದೆ ಯಾವ ಕಾರ್ಯಕ್ರಮಗಳು ಸಮಾರೋಪವಾಗುವುದಿಲ್ಲ. ಧಾರವಾಡದಲ್ಲಿ ಸಂಗೀತ ಕಲಾವಿದರ ಸಂಖ್ಯೆ ಹೆಚ್ಚಾಗಿದ್ದು, ಕೇಳುಗರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಅದರಲ್ಲೂ ಯುವಕರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ನಗರದಲ್ಲಿ ಟ್ರಸ್ಟ್ಗಳ ಸಂಖ್ಯೆಯೂ ಹೆಚ್ಚಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ: ಪಂ. ಬಸವರಾಜ ರಾಜಗುರು ಟ್ರಸ್ಟ್ ವತಿಯಿಂದ ಮೈಸೂರಿನ ರಾಜೀವ ತಾರಾನಾಥ ಅವರಿಗೆ ರು. 1 ಲಕ್ಷ ನಗದು ಹಾಗೂ ಸ್ಮರಣಿಕೆಯುಳ್ಳ ರಾಷ್ಟ್ರೀಯ ಪ್ರಶಸ್ತಿ ಹಾಗೂ ರು. 25 ಸಾವಿರ ನಗದು ಹಾಗೂ ಸ್ಮರಣಿಯುಳ್ಳ ಯವ ಪ್ರಶಸ್ತಿಯನ್ನು ಕೋಲ್ಕತ್ತಾದ ಅನುಬ್ರುತ್ ಚಟರ್ಜಿ ಹಾಗೂ ಬೆಂಗಳೂರಿನ ಕೌಶಿಕ್ ಐತಾಳ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿ ಮಾತನಾಡಿ, ಪಂ. ಬಸವರಾಜ ರಾಜಗುರು ಅವರು 1938ರಿಂದ 1991ರ ವರೆಗೆ ಆಕಾಶವಾಣಿಯ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅಲ್ಲದೆ, ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿಯೂ ಅವರು ಕಾರ್ಯಕ್ರಮ ನೀಡಿದ್ದಾರೆ ಎಂದರು.
ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ ಜಿ.ಎಂ. ಹೆಗಡೆ, ಬಿ.ಡಿ. ಹಿರೇಗೌಡರ, ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಡಾ. ಉದಯ ದೇಸಾಯಿ ಇದ್ದರು. ಆನಂತರ ಪ್ರಶಸ್ತಿ ಪುರಸ್ಕೃತರಿಂದ ವಿಶಿಷ್ಟ ಸಂಗೀತ ನಡೆಯಿತು.