ಶ್ರೀಕೃಷ್ಣಾಷ್ಟಮಿಗೆ ಭರದ ಸಿದ್ಧತೆ
ಹುಬ್ಬಳ್ಳಿ: ರಾಯಾಪುರ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆ. 28ರಂದು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆದಿದೆ. ಈ ಬಾರಿ ಸುಮಾರು 30 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಜನ್ಮಾಷ್ಟಮಿ ಹಿಂದೂಗಳಿಗೆ ದೊಡ್ಡ ಉತ್ಸವ. ದೇಶದಾದ್ಯಂತ ಜನ್ಮಾಷ್ಟಮಿಯನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಈ ಹರ್ಷವನ್ನು ರಾಯಾಪುರ ಇಸ್ಕಾನ್‌ದಲ್ಲಿಯೂ ನೋಡಬಹುದಾಗಿದೆ. ಇಸ್ಕಾನ್ ದೇವಾಲಯವನ್ನು ಮನೋಹಕರ ದೀಪ, ಹೂಗಳಿಂದ ಸಿಂಗರಿಸಲಾಗುತ್ತದೆ. ಅಂದು ಬೆಳಗ್ಗೆ 4 ಗಂಟೆಗಾಗಲೇ ಕೃಷ್ಣ-ಬಲರಾಮರಿಗೆ ಮಂಗಳಾರತಿ ಮಾಡುವುದರೊಂದಿಗೆ ಪೂಜೆ ಆರಂಭವಾಗುತ್ತದೆ. ಮಂಗಳಾರತಿಯ ನಂತರ ಕೃಷ್ಣ-ಬಲರಾಮರಿಗೆ ವಿಶೇಷವಾಗಿ ವೃಂದಾವನ ಅಲಂಕಾರದಿಂದ ಶೃಂಗರಿಸಲಾಗುತ್ತದೆ. ಈ ವಿಶೇಷ ಪೋಷಾಕು ಮತ್ತು ಆಭರಣಗಳನ್ನು ಶ್ರೀ ಕೃಷ್ಣನ ಜನ್ಮಸ್ಥಳವಾದ ಮಥುರಾದಿಂದ ತರಿಸಿಕೊಳ್ಳಲಾಗಿದೆ. ಈ ವಿಶೇಷತೆಗಳಿಗೆ ಕೂಡಿದ ಕೃಷ್ಣ-ಬಲರಾಮರ ದರ್ಶನವನ್ನು ಶೃಂಗಾರ ಆರತಿ ಮುಖಾಂತರ ಬೆಳಗ್ಗೆ 7.30ಕ್ಕೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಆ ದಿನ ಮಧ್ಯರಾತ್ರಿ 12ರ ವರೆಗೂ ದೇವಸ್ಥಾನದ ವಿವಿಧ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿರುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಇದೇ ದಿನ ಶ್ರೀಕೃಷ್ಣನ ಲೀಲೆಗಳನ್ನು ಸಾರಿ ಹೇಳುವ ಹಲವು ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಲಿದೆ. ಭಜನೆ, ವಾದ್ಯ ಸಂಗೀತ, ಜುಗಲ್ ಬಂದಿ, ಗಾಯನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಹಿಂದುಸ್ತಾನಿ ಗಾಯಕಿ ಸಹನಾ ಭಟ್, ಮೋಹನ ಗುರುಸ್ವಾಮಿ ಮತ್ತಿತರರು ಕಾರ್ಯಕ್ರಮ ನಡೆಸಿಕೊಡುವರು.
ಪೂಜೆ ಪುನಸ್ಕಾರ: ಬೆಳಗ್ಗೆ 10 ಗಂಟೆಯಿಂದ ರಾತ್ರಿ 10ರ ವರೆಗೆ ಅರ್ಚನೆ, ಆರತಿ ನಿರಂತರವಾಗಿ ನಡೆಯಲಿದೆ. ಶ್ರೀಕೃಷ್ಣ ಬಲರಾಮರಿಗೆ 108 ಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಿ ಪ್ರಸಾದ ವಿತರಿಸಲಾಗುವುದು. ರಾತ್ರಿ 9.30ಕ್ಕೆ ಮಾಹಾ ಅಭಿಷೇಕ ನಡೆಯಲಿದೆ. ಪವಿತ್ರ ಮಂತ್ರಪಠಣೆ, ಪ್ರಾರ್ಥನೆ, ದೇವರ ಸ್ತೋತ್ರ ನಡೆಯಲಿದೆ. ರಾತ್ರಿ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಉತ್ಸವದ ನಿಮಿತ್ತ ಭಕ್ತರ ಸೌಲಭ್ಯಕ್ಕಾಗಿ ಸಾರಿಗೆ ಸೇವೆಯನ್ನು ಸಾರಿಗೆ ಸಂಸ್ಥೆ ಹಾಗೂ ಬೇಂದ್ರ ನಗರ ಸಾರಿಗೆ ಸೇವೆಯನ್ನು ಮಧ್ಯರಾತ್ರಿ 1.30ರ ವರೆಗೆ ವಿಸ್ತರಿಸಲು ಕೋರಲಾಗಿದೆ ಎಂದರು.