ಛಬ್ಬಿ ಗೆಲವು: ಭರ್ಜರಿ ವಿಜಯೋತ್ಸವ
ಧಾರವಾಡ: ಸ್ಥಳೀಯ ಸಂಸ್ಥೆಗಳಿಂದ ಧಾರವಾಡ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ 43 ಮತಗಳ ಅಂತರದಿಂದ ಗೆಲವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಘೋಷಣೆಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸಿದರು.
ನಾಗರಾಜ ಛಬ್ಬಿ ಗೆಲುವಿನ ಘೋಷಣೆ ಆಗುವುದೇ ತಡ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗುತ್ತಾ ವಿಜಯೋತ್ಸವದ ಸಂಭ್ರಮ ಆಚರಿಸಿದರು.
ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಛಬ್ಬಿ ಜಯ ಪಡೆದಿದ್ದಾರೆಂಬ ಸುದ್ದಿ ತಿಳಿದು ಆರಂಭದಲ್ಲಿ ಸಂಭ್ರಮಿಸುವ ಹೊತ್ತಿಗೆ ಕಾರ್ಯಕರ್ತರು ಒಮ್ಮೆಲೆ ಚಕಿತರಾದರು. ಸ್ಪರ್ಧಿಸಿದ ಇಬ್ಬರೂ ಅಭ್ಯರ್ಥಿಗಳು ಶೇ. 50ರಷ್ಟು ಮತ ಪಡೆಯದ ಹಿನ್ನೆಲೆಯಲ್ಲಿ 2ನೇ ಪ್ರಾಶಸ್ತ್ಯ ಮತ ಎಣಿಕೆ ನಡೆಯುತ್ತಿದೆ. ಛಬ್ಬಿ ಇನ್ನೂ ಗೆದ್ದಿಲ್ಲ ಎಂಬ ಸುದ್ದಿ. ಮಧ್ಯಾಹ್ನ 3.40ಕ್ಕೆ ಅಧಿಕೃತ ಘೋಷಣೆಯಾಗಿ ನಮ್ಮ ನಾಯಕನೇ ಗೆದ್ದನೆಂದು ತಿಳಿದು ಅರ್ಧಕ್ಕೆ ನಿಂತ ವಿಜಯೋತ್ಸವ ಭರ್ಜರಿಯಾಗಿ ಮುಗಿಯಿತು.
ಮತ ಎಣಿಕಾ ಕೇಂದ್ರದಿಂದ ಛಬ್ಬಿ, ಸಚಿವರಾದ ಸಂತೋಷ ಲಾಡ್, ಪ್ರಕಾಶ ಹುಕ್ಕೇರಿ ಹಾಗೂ ಪಕ್ಷದ ಮುಖಂಡರು ಹೊರ ಬರುತ್ತಿದ್ದಂತೆ ಹರ್ಷದಿಂದ ಕಾರ್ಯಕರ್ತರು ಹೂಮಾಲೆಗಳನ್ನು ಹಾಕುತ್ತ ಬಣ್ಣ ಹಚ್ಚಿ ಸಿಹಿ ತಿನಿಸಿ ಸಂಭ್ರಮಿಸಿದರು.
ಶಾಸಕರಾದ ವಿನಯ ಕುಲಕರ್ಣಿ, ಸಿ.ಎಸ್. ಶಿವಳ್ಳಿ, ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ, ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ದೊರೆರಾಜ ಮಣಿಕುಂಟ್ಲ, ಸುಭಾಸ ಶಿಂಧೆ, ಶೈಲಾ ಕಾಮರಡ್ಡಿ, ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ಮುಖಂಡರಾದ ವಸಂತ ಅರ್ಕಾಚಾರ, ಅನ್ವರ ಮುಧೋಳ, ಅರವಿಂದ ಕಟಗಿ, ಸಿರಾಜ ಅಹಮ್ಮದ ಕುಡಚಿವಾಲೆ, ಎಂ.ಎಸ್. ಪಾಟೀಲ, ಗಿರೀಶ ಗದಿಗೆಪ್ಪಗೌಡರ, ಶ್ರೀನಿವಾಸ ಜೋಶಿ, ವಿಜಯ ಕುಲಕರ್ಣಿ, ಮಹೇಶ ದಾಬಡೆ, ಸದಾನಂದ ಡಂಗನವರ, ಗೋಪಾಲ ಕುಲಕರ್ಣಿ, ವಾದಿರಾಜ ಕುಲಕರ್ಣಿ, ಪಾರ್ಶ್ವನಾಥ ಪತ್ರಾವಳಿ, ದಯಾನಂದ ಕುಂದೂರ, ಆರ್.ಎಚ್. ಕೋನರೆಡ್ಡಿ, ಎನ್.ಆರ್. ಪಾಟೀಲ, ಬಸಮ್ಮ ಪ್ಯಾಟಿ, ರಾಜು ಇನಾಮದಾರ, ರಮೇಶ, ಬಾಲಸಿಂಗ, ಇಬ್ರಾಹಿಂ ಚಿನವಾರ, ರಾಜಶೇಖರ ಮೆಣಸಿನಕಾಯಿ, ಮನೋಜ ಕರ್ಜಗಿ, ಸಾವಿರಾರು ಕಾರ್ಯಕರ್ತರು ಇದ್ದರು.