ಧಾರವಾಡದಲ್ಲೂ ಇನ್ನು ಕ್ಷೀರಭಾಗ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 26
ರಾಜ್ಯಾದ್ಯಂತ ಆ. 1ರಿಂದ ಆರಂಭವಾದ ಕ್ಷೀರಭಾಗ್ಯ ಯೋಜನೆ ಧಾರವಾಡ ಜಿಲ್ಲೆಯಲ್ಲಿ ಆ. 31ರೊಳಗಾಗಿ ಶೇ. 50ರಷ್ಟು ಮಕ್ಕಳಿಗೆ ತಲುಪಿಸುವ ಯೋಜನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನೂರು ದಿನ ನೂರಾರು ನಿರ್ಣಯ ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯ 1087 ಶಾಲೆಯ 2,10,904 ಮಕ್ಕಳು ಪಾತ್ರರಾಗಲಿದ್ದಾರೆ. ಸೆ. 15 ರೊಳಗಾಗಿ ಸಂಪೂರ್ಣವಾಗಿ ಜಿಲ್ಲೆಯ ಎಲ್ಲ ಮಕ್ಕಳಿಗೆ ಯೋಜನೆ ತಲುಪಿಸಲಾಗುವುದು. ಅಲ್ಲದೇ, ಈ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಇಸ್ಕಾನ್ ಸಂಸ್ಥೆ ಹಾಗೂ ಅದಮ್ಯ ಚೇತನ ಸಂಸ್ಥೆಗಳ ಸಹಕಾರ ಪಡೆಯಲಾಗುತ್ತಿದೆ ಎಂದರು.
ಮುಂದುವರೆದ ಭಾಗ್ಯಲಕ್ಷ್ಮೀ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅನುಷ್ಠಾನಗೊಳಿಸಿರುವ ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ, ಸೈಕಲ್ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನು ಮುಂದುವರೆಸಲು ಸರ್ಕಾರ ತಿರ್ಮಾನಿಸಿದೆ. ಈಗಾಗಲೇ ಈ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಸದ್ಯದಲ್ಲಿ ಈ ಎಲ್ಲ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲಿ ರೈತರಿಗೆ ಜಿಪಂ, ತಾಪಂ, ಗ್ರಾಪಂಗಳ ಮೂಲಕ ಬೆಳೆ ಹಾನಿ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಬೆಳೆ ಹಾನಿ ಹಾಗೂ ಬರಗಾಲಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಒಪ್ಪಿಸುವಂತೆ ಜಿಲ್ಲಾಡಳಿತಕ್ಕೆ ತಿಳಿಸಲಾಗಿದ್ದು, ವರದಿ ಬಂದ ನಂತರ ಬೆಳೆ ಹಾನಿಗೆ ಪರಿಹಾರ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸದ್ಯದಲ್ಲೇ ಇತ್ಯರ್ಥ: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಶೇ. 75ರಷ್ಟು ಅನುಷ್ಠಾನಗೊಳಿಸುವ ಗುರಿ ಹೊಂದಿದೆ. ಪ್ರಸ್ತುತ ಬಂದ ಪಡಿತರ ಅರ್ಜಿಗಳನ್ನು ಸದ್ಯದಲ್ಲಿಯೇ ಇತ್ಯರ್ಥಗೊಳಿದಲಾಗುತ್ತದೆ. ಅನ್ನಭಾಗ್ಯ ಯೋಜನೆಯಲ್ಲಿ ಗೋದಿ ಹಾಗೂ ಜೋಳ ಧಾನ್ಯಗಳನ್ನೂ ನೀಡಲು ತಿರ್ಮಾನಿಸಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ ಗುಂಡೂರಾವ್ ಅವರು ಈ ಯೋಜನೆಯಲ್ಲಿ ರಾಗಿಯನ್ನು ಸಹ ನೀಡುತ್ತೇವೆಂದು ತಿಳಿಸಿದ್ದು ಸಂತಸದ ಸಂಗತಿ ಎಂದು ಲಾಡ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಎಸ್. ಶಿವಳ್ಳಿ, ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ, ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಇದ್ದರು.