ಪರಿಷತ್ ಚುನಾವಣೆ: ಛಬ್ಬಿಗೆ ಗೆಲವು
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 26
ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಇಲ್ಲಿನ ಸ್ಥಳೀಯ ಸಂಸ್ಥೆಗಳಿಂದ ನಡೆದ ಅವಿಭಜಿತ ಧಾರವಾಡ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ 43 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಸೋಮವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ನಡೆದ ಮತ ಎಣಿಕೆಯಲ್ಲಿ 7114 ಅರ್ಹ ಮತಗಳ ಪೈಕಿ ನಾಗರಾಜ ಛಬ್ಬಿಗೆ 3493, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ಗೆ 3450 ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಹಾದಿಗೆ 175 ಮತಗಳು ಚಲಾವಣೆಯಾಗಿವೆ. ಒಟ್ಟು 179 ಮತಗಳು ತಿರಸ್ಕೃತಗೊಂಡಿವೆ. ಈ ಮಧ್ಯೆ ಬಿಜೆಪಿಯ ಪ್ರದೀಪ ಶೆಟ್ಟರ್ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕೆಲವು ಸಂಶಯಗಳಿದ್ದು ಮರು ಎಣಿಕೆ ಮಾಡಬೇಕೆಂದು ಚುನಾವಣಾಧಿಕಾರಿ ಸಮೀರ ಶುಕ್ಲ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಚುನಾವಣಾ ವೀಕ್ಷಕರ ಹಾಗೂ ಮತಗಟ್ಟೆ ಏಜೆಂಟ್ರ ಎದುರೇ ಮತ ಎಣಿಕೆ ಮಾಡಿದ್ದು, ಮತಗಳ ಮರು ಎಣಿಗೆ ನಿರ್ದಿಷ್ಟ ಕಾರಣ ನೀಡದ್ದರಿಂದ ಅರ್ಜಿಯನ್ನು ವಜಾ ಮಾಡಲಾಯಿತು.
ಕಾಂಗ್ರೆಸ್ ಶ್ರಮದ ಗೆಲವು.: ಮತ ಎಣಿಕೆ ಆರಂಭದಿಂದ ಮುಕ್ತಾಯದ ವರೆಗೂ ಬಿಜೆಪಿಯ ಪ್ರದೀಪ ಶೆಟ್ಟರ್ ಮತ ಎಣಿಕಾ ಕೇಂದ್ರದಲ್ಲಿಯೇ ಕುಳಿತಿದ್ದರು. ಸೋಲು ಖಚಿತಗೊಂಡಿದ್ದು ತಿಳಿದು ಕೇಂದ್ರದಿಂದ ಹೊರ ಹೋದರು. ಇತ್ತ ಗೆಲವು ಖಚಿತವಾದ ಕೂಡಲೇ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸಣ್ಣ ಕೈಗಾರಿಕೆ ಇಲಾಖೆ ಸಚಿವ ಪ್ರಕಾಶ ಹುಕ್ಕೇರಿ ಕೃಷಿ ವಿವಿ ಆವರಣದಲ್ಲಿ ವಿಜಯೋತ್ಸವ ಆಚರಿಸಿ ಮತ ಎಣಿಕಾ ಕೇಂದ್ರಕ್ಕೆ ಬಂದರು. ಪಕ್ಷದ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರ ಶ್ರಮದಿಂದ ಗೆಲವು ಸಾಧಿಸಿದ್ದು, ಹಣ ಬಲ ಚುನಾವಣೆಯಲ್ಲಿ ನಡೆಯೋದಿಲ್ಲ ಎಂಬುದಕ್ಕೆ ನನ್ನ ಗೆಲವೇ ನಿದರ್ಶನ ಎಂದು ನಾಗರಾಜ ಛಬ್ಬಿ ಈ ಸಂದರ್ಭದಲ್ಲಿ ಹೇಳಿದರು. ಈ ಗೆಲವು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಇದು ಅವಕಾಶವಾದಿಗಳಿಗೆ ಆದ ಸೋಲು. ಬಿಜೆಪಿ ಸರ್ಕಾರದ ಅವಧಿಯಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದ್ದವು. ಆಗ 15 ಬಿಜೆಪಿ ಶಾಸಕರಿದ್ದರು. ಆಗ ಆಯ್ಕೆಯಾದವರಲ್ಲಿ ಬಹಳಷ್ಟು ಬಿಜೆಪಿ ಬೆಂಬಲಿಗರು.ಆದರೂ ಅವರಲ್ಲಿ ಹೆಚ್ಚಿನವರು ಕಾಂಗ್ರೆಸ್ಗೆ ಬೆಂಬಲ ನೀಡಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ವಿಳಂಬ ತೀರ್ಮಾನ: ಮೊದಲೇ ವಿಳಂಬವಾಗಿ ಆರಂಭವಾದ ಮತ ಎಣಿಕೆ ಪಕ್ರಿಯೆ, ಮತ ಎಣಿಕೆ ಪೂರ್ಣಗೊಂಡ ಬಳಿಕವೂ ಯಾವ ಅಭ್ಯರ್ಥಿಗೆ ನಿಖರವಾಗಿ ಎಷ್ಟು ಮತ ಬಿದ್ದಿವೆ ಎಂಬ ವಿಷಯ ಗೊತ್ತಾಗಲಿಲ್ಲ. ಮೊದಲ ಪ್ರಾಶಸ್ತ್ಯದ ಮತಗಳು ನಾಗರಾಜ ಛಬ್ಬಿ ಅವರಿಗೆ ಬಿದ್ದಿದ್ದರೂ ಒಟ್ಟು ಮತಗಳ ಅರ್ಧದಷ್ಟು ಮತಗಳು ಬೀಳದ ಕಾರಣ, ಮೂರನೇ ಅಭ್ಯರ್ಥಿಗೆ ಬಿದ್ದ ಮತಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯ ಬಳಿಕವೂ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲೇ ಇಲ್ಲ. ಚುನಾವಣಾ ಆಯೋಗಕ್ಕೆ ಸಲಹೆ ಕೇಳಲಾಗಿದೆ. ಅಲ್ಲಿಂದ ಮಾಹಿತಿ ಬಂದ ಬಳಿಕ ಚುನಾವಣಾ ಫಲಿತಾಂಶ ಘೋಷಿಸುವುದಾಗಿ ಚುನಾವಣಾಧಿಕಾರಿಗಳು ಹೇಳುತ್ತಿದ್ದಾರೆ. ಬರೋಬ್ಬರಿ ಮೂರೂವರೆ ಗಂಟೆ ಮಾಧ್ಯಮದವರು ಮತ ಎಣಿಕೆ ಕೇಂದ್ರದಲ್ಲೇ ಕಾದು ನಿಲ್ಲುವಂತಾಯಿತು.
ಗೆದ್ದರೂ ಸುಸ್ತಾದ ಛಬ್ಬಿ
ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಗರಾಜ ಛಬ್ಬಿ ಗೆಲುವನ್ನು ಸಾಧಿಸಿದ್ದರೂ ಅಧಿಕೃತವಾಗಿ ಗೆಲವಿನ ಘೋಷಣೆಗಾಗಿ ತಾಸುಗಟ್ಟಲೇ ಕಾದು ಸುಸ್ತಾದ ಘಟನೆಯೂ ಜರುಗಿತು. ಪ್ರಥಮ ಸುತ್ತಿನಲ್ಲಿಯೇ ಛಬ್ಬಿ ಆಯ್ಕೆಯಾಗಿರುವುದು ಖಚಿತವಾದರೂ ಗೆಲುವಿಗೆ ಬೇಕಾಗಿದ್ದ ಒಟ್ಟು ಮತಗಳ ಅರ್ಧಕ್ಕಿಂತ ಒಂದು ಮತಗಳನ್ನು ಪಡೆಯದ ಕಾರಣ, ದ್ವಿತೀಯ ಪ್ರಾಶಸ್ತ್ಯದ ಮತಗಳಿಗೆ ಮೊರೆ ಹೋಗುವುದು ಅನಿವಾರ್ಯವಾಯಿತು. ಇದೇ ವೇಳೆ ಬಿಜೆಪಿ ಮುಖಂಡರು ಮರು ಮತ ಎಣಿಕೆಗೆ ಲಿಖಿತವಾಗಿ ಮನವಿ ಸಲ್ಲಿಸಿದ್ದು ಮತ್ತು ಫಲಿತಾಂಶ ಕುರಿತು ಚುನಾವಣಾಧಿಕಾರಿಗಳು ಆಯೋಗದ ಸ್ಪಷ್ಟನೆ ಸಹ ಕೋರಿದರು. ತಾವು ಗೆಲವು ಸಾಧಿಸಿರುವುದು ಖಚಿತ ಆಗಿದ್ದರೂ ಆ ಗೆಲವನ್ನು ತಮ್ಮದಾಗಿಸಿಕೊಂಡಿದ್ದೇನೆ ಎಂಬ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.