ಹತೋಟಿಯಾಗದ ಪಾರ್ಥೇನಿಯಂ
ಧಾರವಾಡ: ಕೃಷಿ ವಿಶ್ವವಿದ್ಯಾಲಯ ಹಾಗೂ ಕಳೆ ವಿಜ್ಞಾನ ನಿಯಂತ್ರಣ ವಿಭಾಗ ವತಿಯಿಂದ ಇಲ್ಲಿನ ಕೃಷಿ ವಿವಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಾರ್ಥೆನಿಯಂ ಕಳೆ ಜಾಗೃತಿ ಅಭಿಯಾನ ಸಪ್ತಾಹಕ್ಕೆ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ. ಬಿ.ಎಂ. ಖಾದಿ ಚಾಲನೆ ನೀಡಿದರು.
ಬಳಿಕ ಮತಾನಾಡಿದ ಅವರು, ಕೃಷಿ ಭೂಮಿ ಪಾರ್ಥೇನಿಯಂ ಕಳೆ ಕೃಷಿ ಭೂಮಿಯಲ್ಲಿ ಬೆಳೆಯುತ್ತಿದ್ದು, ಕೃಷಿಕರಿಗೆ ಇದನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೃಷಿ ಭೂಮಿಯಿಂದ ಕಡಿಮೆ ಪ್ರಮಾಣದ ಇಳುವರಿ ಬರುತ್ತಿದೆ. ಅಲ್ಲದೇ, ಪಾರ್ಥೇನಿಯಂ ಕಳೆ ಮನುಷ್ಯನ ಆರೋಗ್ಯಕ್ಕೂ ಹಾನಿ ಮಾಡುತ್ತಿದೆ. ಕೃಷಿಕರು ಕೆಲ ಸಂದರ್ಭದಲ್ಲಿ ಈ ಕಳೆಯನ್ನು ಹೊಸಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪ್ರಯೋಜನವಾಗುತ್ತಿಲ್ಲ. ಕಳೆ ತೆಗೆದ ನಂತರ ಕೆಲ ದಿನಗಳಲ್ಲಿ ಮತ್ತೆ ಹುಟ್ಟಿಕೊಳ್ಳುತ್ತಿದ್ದು, ರೈತರಿಗೆ ಕಿರಿಕಿರಿ ಕಳೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ಕೃಷಿ ವಿಸ್ತಾರಣಾ ನಿರ್ದೇಶಕ ಡಾ. ಎಲ್. ಕೃಷ್ಣಾ ನಾಯಕ ಮಾತನಾಡಿ, ಪಾರ್ಥೇನಿಯಂ ಕಳೆಯಿಂದ ಮುಕ್ತವಾಗಲು ಕಳೆ ನಿಯಂತ್ರಣ ಮೇಲಿಂದ ಮೇಲೆ ನಡೆಯಬೇಕು. ಈ ಕಳೆಗೆ ಬೀಜಾಭಿವೃದ್ಧಿ ಶಕ್ತಿ ಅಧಿಕವಾಗಿದೆ. ಆದ್ದರಿಂದ ಕಳೆ ಹೂವಾಡುವ ಮುನ್ನವೇ ಕಿತ್ತು ಎಸೆಯಬೇಕು ಎಂದು ಸಲಹೆ ನೀಡಿದರು. ಕ್ಷೇತ್ರ ಅಧೀಕ್ಷಕ ಡಾ. ಬಿ.ಟಿ. ನಿಂಗನೂರ, ಡಾ. ಬಿ.ಎನ್. ಪಾಟೀಲ, ಡಾ. ಕಿರಣ ಮಿರಜಕರ್, ಡಾ. ಡಿ.ಎಸ್. ಉಪ್ಪಾರ, ಡಾ. ರಮೇಶ ಬಾಬು, ಡಾ.ಪಿ. ಜೋನ್ಸ್ ನಿರ್ಮಲನಾಥ ಇದ್ದರು.
ಅಕ್ರಮ ಮರಳು ಸಾಗಾಟ: 17 ಲಾರಿ ವಶ
ಲಕ್ಷ್ಮೇಶ್ವರ: ಪಟ್ಟಣದ ಮುಖಾಂತರ ಹುಬ್ಬಳ್ಳಿ ಹಾಗೂ ಮತ್ತಿತರ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 17 ಲಾರಿಗಳನ್ನು ಭಾನುವಾರ ಮತ್ತು ಸೋಮವಾರ ದಾಳಿ ಮಾಡಿದ ಪ್ರೊಬೇಶನರಿ ಡಿವೈಎಸ್ಪಿ ಬಿ.ಎಸ್. ನೇಮಗೌಡರ ವಶಪಡಿಸಿಕೊಂಡಿದ್ದಾರೆ. 20 ದಿನಗಳಿಂದ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊಬೇಶನರಿ ಡಿವೈಎಸ್ಪಿ ಬಿ.ಎಸ್. ನೇಮಗೌಡರ ಸುಮಾರು 100ಕ್ಕೂ ಹೆಚ್ಚು ಮರಳು ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.