ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ
ಬ್ಯಾಡಗಿ: ತಾಲೂಕಿನ ಬೀರನಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆ ಬಳಿಯಿರುವ ಅಂಗನವಾಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹಾಯಕಿಯೊಬ್ಬಳು ಮಗುವಿಗೆ ಥಳಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯಾ ಶಂಕರಪ್ಪ ಮಸಾಲಿ ಎಂಬ ಬಾಲಕಿ ಸೋಮವಾರ ಶಾಲೆಯಲ್ಲಿ ವಾಂತಿಯನ್ನು ಮಾಡಿಕೊಂಡಿದ್ದು ಇದನ್ನೇ ನೆಪವಾಗಿಟ್ಟುಕೊಂಡ ಸಹಾಯಕಿ ನೀಲಮ್ಮ ಗಣಜೂರ ವೈರ್ ಬಳಸಿ ಬಾಲಕಿಯ ಬೆನ್ನಮೇಲೆ ಥಳಿಸಿದ್ದು ಆಕೆಯ ರಾಕ್ಷಸೀ ಪ್ರವೃತ್ತಿ ಖಂಡಿಸಿದರಲ್ಲದೇ ಸಂಬಂಧಿಸಿದ ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಲಲಿತಾ ರುದ್ರಪ್ಪ ಈಳಗೇರ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಸದಸ್ಯ ಈಶಣ್ಣ ದೊಡ್ಮನಿ, ಅಂಗನವಾಡಿಯಲ್ಲಿನ ಮಕ್ಕಳು ಪ್ರಪಂಚ ಜ್ಞಾನವಿರದ ಮಗ್ಧರು ಹೀಗಾಗಿ ಹಲವಾರು ತಪ್ಪು ಮಾಡುವುದು ಸಹಜ, ಇವೆಲ್ಲವನ್ನು ಸಹಿಸಿಕೊಂಡು ಮಕ್ಕಳನ್ನು ಸಲಹುವುದಕ್ಕಾಗಿಯೇ ಕೇಂದ್ರಕ್ಕೊಂದು ಆಯಾಗಳನ್ನು ಸರ್ಕಾರ ನೇಮಕ ಮಾಡಿ ಸಂಬಳ ನೀಡುತ್ತಿದೆ. ಆದರೆ, ಕಳೆದ ಹಲವಾರು ದಿನಗಳಿಂದ ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನು ಥಳಿಸುತ್ತಿರುವ ನೀಲಮ್ಮ ಗಣಜೂರು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದರು.
ವೀರಯ್ಯ ಹಿರೇಮಠ ಮಾತನಾಡಿ, ಸಹಾಯಕಿ ರಾಕ್ಷಸಿ ಪ್ರವೃತ್ತಿಗೆ ಬೆಚ್ಚಿರುವ ಮಕ್ಕಳು ಶಾಲೆಗೆ ಹೋಗುವಂತೆ ಮನವೊಲಿಸಿದರೂ ಸಾಧ್ಯವಾಗುತ್ತಿಲ್ಲ. ಬದಲಾಗಿ ಸಹಾಯಕಿಯನ್ನು ನೋಡುತ್ತಿದ್ದಂತೆ ಓಡಿಹೋಗಿ ತಪ್ಪಿಸಿಕೊಳ್ಳುವ ಹಂತಕ್ಕೆ ಮಕ್ಕಳು ಬಂದಿದ್ದು, ಇದರಿಂದ ಸುಮಾರು 72 ರಷ್ಟಿದ್ದ ಮಕ್ಕಳ ಸಂಖ್ಯೆ ಇದೀಗ 12ಕ್ಕೆ ಇಳಿದಿದೆ ಎಂದು ಆರೋಪಿಸಿದರು. ಕೂಡಲೇ ಸಹಾಯಕಿಯನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಕೇಂದ್ರದ ಎದುರು ಅಮರಣಾಂತ ಉಪವಾಸ ಮಾಡುವುದಾಗಿ ಎಚ್ಚರಿಸಿದರು. ನಾಗಪ್ಪ ಹೊಂಬರಡಿ ಮಾತನಾಡಿ, ಕೇಂದ್ರದ ಮಕ್ಕಳಿಗೆ ಉತ್ತಮ ಶಿಕ್ಷಣ ಮರೀಚಿಕೆಯಂತಾಗಿದೆ. ಕಾರ್ಯಕರ್ತೆ ಲಲಿತಾ ಈಳಗೇರ ಸಹಾಯಕಿಯನ್ನು ತನ್ನ ಹೊಲದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು ಇದನ್ನೇ ನೆಪವಾಗಿಟ್ಟು ಕೊಂಡು ಸಹಾಯಕಿ ಕಾರ್ಯಕರ್ತೆ ಮೇಲಿನ ಸಿಟ್ಟನ್ನು ಮಕ್ಕಳ ಮೇಲೆ ತೀರಿಸಿಕೊಳ್ಳುತ್ತಿರುವುದಾಗಿ ಆರೋಪಿಸಿದರು. ಕೇಂದ್ರಕ್ಕೆ ಭೇಟಿ ನೀಡಿದ ಮೇಲ್ವಿಚಾರಕಿ ಗೀತಾ ರಡ್ಡೇರ, ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಯಾವುದೇ ಕಾರಣಕ್ಕೂ ಸಹಾಯಕಿಯನ್ನು ಅಮಾನತುಗೊಳಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರುವ ನಿರ್ಧ್ಧಾರವನ್ನು ತಿಳಿಸಿದರು.