ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇನ್ನೂ ಮರೆಯಾಗಿಲ್ಲ ಬರಗಾಲ

Mainashree
Updated On : 28 Aug 2013, 11:32 am

ಕನ್ನಡಪ್ರಭ ವಾರ್ತೆ, ಹೆಬ್ಬಳ್ಳಿ(ಧಾರವಾಡ), ಆ.27
ಧಾರವಾಡದ ಪಶ್ಚಿಮ ಭಾಗಕ್ಕೆ ಉತ್ತಮ ಮಳೆಯಾದರೆ, ಪೂರ್ವ ಭಾಗಕ್ಕೆ ಈ ಬಾರಿ ಬರಗಾಲದ ಭೀತಿ ಎದುರಾಗಿದೆ.
ಅದರಲ್ಲೂ ತಾಲೂಕಿನ ಹೆಬ್ಬಳ್ಳಿ ಹೋಬಳಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಮೂರು ವರ್ಷಗಳಿಂದ ಬರಗಾಲ ಮರೆಯಾಗಿಲ್ಲ. ಕಲಘಟಗಿ, ಅಳ್ನಾವರ, ಗರಗ, ಉಪ್ಪಿನ ಬೆಟಗೇರಿ, ನಿಗದಿ ಈ ಪಶ್ಚಿಮ ಭಾಗದ ಹೋಬಳಿಗಳಲ್ಲಿ ಈ ಬಾರಿ ಸಾಧಾರಣ ಮಟ್ಟಿಗೆ ಬೆಳೆ ಬಂದಿದ್ದರೆ, ಅಮ್ಮಿನಬಾವಿ, ಹೆಬ್ಬಳ್ಳಿಯಿಂದ ನವಲಗುಂದ ವರೆಗಿನ ಧಾರವಾಡ ಪ್ರದೇಶಾದ್ಯಂತ ಪ್ರಸ್ತುತ ಬರಗಾಲದ ಛಾಯೆ ಎದ್ದು ಕಾಣುತ್ತಿದೆ.
ನೆಲಕಚ್ಚಿದ ಬೆಳೆ: ಸತತ ಮೂರು ವರ್ಷಗಳ ಬರಗಾಲದ ಕಹಿಯನ್ನು ಈ ಬಾರಿ ಮರೆತ ರೈತ ಸಾಲ ಮಾಡಿ ಹೆಸರು, ಹತ್ತಿ, ಶೇಂಗಾ, ಸೋಯಾ ಇನ್ನಿತರೆ ಬೆಳೆಗಳನ್ನು ಬೆಳೆದಿದ್ದ. ಆದರೀಗ, ಮಳೆಯಾಗದ ಕಾರಣ ಆ ಬೆಳೆಗಳು ನೆಲಕಚ್ಚಿವೆ. ಅದರಲ್ಲೂ ಹೆಸರು ಬೆಳೆ ರೈತನ ಕಣ್ಣೀರಿಗೆ ಹೆಸರಾಗಿ ಬಿಟ್ಟಿದೆ. ಹೆಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮುಂಗಾರಿನ ಆರಂಭ ಚೆನ್ನಾಗಿದ್ದರಿಂದ ಆ ಮಳೆ ನಂಬಿಕೊಂಡು, ಇಲ್ಲಿನ ಭಾಗದ ಮುಂಗಾರಿನ ಪ್ರಮುಖ ಬೆಳೆಯಾದ ಹೆಸರನ್ನು ಬೆಳೆದರು. ಹೆಸರು ಬಿತ್ತುವ ಮುನ್ನ ಮಳೆ ಚೆನ್ನಾಗಿಯೇ ಆಯಿತು. ಆದರೆ, ಬಿತ್ತಿದ ನಂತರವೇ ಮಳೆ ಕೈಕೊಟ್ಟಿದ್ದರಿಂದ ಆ ಹೆಸರು ಬೆಳೆಗಾಗಿ ವೆಚ್ಚ ಮಾಡಿದ ಖರ್ಚುನ್ನು ತೆಗೆಯಲಾರದ ಹಂತಕ್ಕೆ ಸಿಲುಕಿ ಕಂಗಾಲಾಗಿದ್ದಾನೆ. ಹೆಬ್ಬಳ್ಳಿ, ವನಹಳ್ಳಿ, ಕನಕೂರು, ಹಾರೋಬೆಳವಡಿ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳ ರೈತರು ಈಗ ಹೆಸರು ಬೆಳೆಯಿಂದ ಶಾಪಕ್ಕೆ ಒಳಗಾಗಿದ್ದಾರೆ.
ಭೂಮಿಗೆ ಹಾಕಿದ ಹೆಸರು ಬೀಜ ಭೂಮಿಯ ಪಾಲಾಗಿದೆ. ಕೆಲವೊಂದಿಷ್ಟು ಭಾಗದಲ್ಲಿ ಬಿತ್ತಿದ ಬೀಜವನ್ನಾದರೂ ತೆಗೆದುಕೊಳ್ಳುವ ಪ್ರಮಾಣದಲ್ಲಿ ಹೆಸರು ಇದ್ದು, ಹೆಬ್ಬಳ್ಳಿ ಗ್ರಾಮದ ಸುತ್ತಮುತ್ತಲಿನ ಭಾಗದಲ್ಲಿ ಬಿತ್ತಿದ ಬೀಜವನ್ನೂ ತೆಗೆದುಕೊಳ್ಳಲಾರದ ಪರಿಸ್ಥಿತಿಯಲ್ಲಿದೆ. ಈ ಬಾರಿಯಾದರೂ ಮುಂಗಾರು ವರದಾನವಾಗಿ ಬರುತ್ತದೆ ಎಂದು ಈ ಭಾಗದ ರೈತರು ಬೀಗಿದ್ದೇ ಬಂತು. ಆದರೆ, ಮನೆಯಲ್ಲಿದ್ದ ಕಾಳುಗಳೂ ಸಹಿತ ಭೂಮಿಯ ಪಾಲಾಗಿ ಹೋಗಿವೆ.
ಕುಸಿದ ಬೆಲೆ: ಹೆಸರು ಬೆಳೆಯೊಂದಿಗೆ ಪ್ರಮುಖ ಬೆಳೆಗಳಾದ ಶೇಂಗಾ, ಹತ್ತಿ, ಸೋಯಾ ತುಸು ಪ್ರಮಾಣ ನಿರೀಕ್ಷೆ ನೀಡಿದ್ದು, ಪ್ರಸ್ತುತ ಅಡ್ಡ ಮಳೆಗಳು ಬಂದರೆ ಮಾತ್ರ ಅವು ಆಸರೆಯಾಗಲಿವೆ. ಮೊದಲು ಎಕರೆಗೆ ನಾಲ್ಕರಿಂದ ಐದು ಚೀಲ ಹೆಸರು ಉತ್ಪಾದನೆಯಾಗುತ್ತಿದ್ದು, ಈ ವರ್ಷ ಒಂದು ಚೀಲಕ್ಕೂ ಬರ ಬಂದಿದೆ. ಹೆಸರು ಬೆಳೆ ಬಿತ್ತಲು ಅದಕ್ಕೆ ರಾಸಾಯನಿಕ ಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರ ಖರ್ಚು ಸೇರಿದಂತೆ ಎಕರೆಗೆ ಸುಮಾರು ಐದು ಸಾವಿರ ರುಪಾಯಿ ಖರ್ಚು ಮಾಡಿರುವ ರೈತರಿಗೆ, ಆ ಖರ್ಚನ್ನು ತೆಗೆಯಲು ಆಗುತ್ತಿಲ್ಲ. ಅಲ್ಲದೇ, ಕಳೆದ ತಿಂಗಳು ಆರು ಸಾವಿರಕ್ಕೂ ಹೆಚ್ಚಿದ್ದ ಹೆಸರಿನ ಬೆಲೆ ಈಗ ದಿಢೀರನೆ ರು. 4 ಅಥವಾ 4,500ಕ್ಕೆ ಇಳಿದಿದೆ.
ಜಿಲ್ಲೆಯ ಒಂದೆಡೆ ಸಮೃದ್ಧಿ ಬೆಳೆ, ಇನ್ನೊಂದೆಡೆ ಬರಗಾಲವಿದ್ದು, ಜನಪ್ರತಿನಿಧಿಗಳು ಎನಿಸಿಕೊಂಡವರು ಬರೀ ರಾಜಕೀಯ ಮಾಡುವುದನ್ನು ಬಿಟ್ಟು ಗ್ರಾಮಗಳತ್ತ ಮುಖ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎನ್ನುವುದು ಬರಗಾಲ ಕಹಿ ಉಂಡವರ ಆಗ್ರಹ.

 ಹೊನ್ನಪ್ಪ ಲಕ್ಕಮ್ಮನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement