ಕಳ್ಳರೂ ಇನ್ನು ಮುಂದೆ ರೌಡಿ ಪಟ್ಟಿಗೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 27
ಬೈಕ್, ಸರಗಳ್ಳತನ ಮಾಡುವವರನ್ನೂ ಇನ್ನು ಮುಂದೆ ರೌಡಿಗಳೆಂದು ಪರಿಗಣಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಂ. ಎನ್. ರೆಡ್ಡಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನವೂ ಕಾನೂನಿನ ಪ್ರಕಾರ ಗಂಭೀರ ಅಪರಾಧವೇ ಆಗಿದೆ. ಇಂಥವರ ವಿರುದ್ಧ ಸಣ್ಣ ಪುಟ್ಟ ಪ್ರಕರಣಗಳಷ್ಟೇ ಅಲ್ಲದೇ ಇನ್ನು ಮುಂದೆ ರೌಡಿ ಪಟ್ಟಿಯಲ್ಲಿ ಸೇರಿಸಲಾಗುವುದು. ಇಂಥ ಪ್ರಕರಣ ದಾಖಲಿಸುವುದರಿಂದ ಕಳ್ಳತನ ಪ್ರಕರಣಗಳು ಕಡಿಮೆಯಾಗಲಿವೆಯಲ್ಲದೇ, ಕಳ್ಳರ ವಿರುದ್ಧ ನಿಗಾ ಇಡಲು ಅನುಕೂಲವಾಗಲಿದೆ ಎಂದರು.
ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರೌಡಿ ಹಿನ್ನೆಲೆಯುಳ್ಳವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಇಂಥವರ ಹತೋಟಿಗೆ ವಿಶೇಷ ನಿಗಾವಹಿಸಲಾಗುವುದು. ವಿಶೇಷ ತಂಡಗಳನ್ನು ರಚಿಸಿ ಇಂಥವರ ಮೇಲೆ ನಿಗಾ ಇಡಲಾಗುವುದು. ಇದೇ ವೇಳೆ ರೌಡಿ ಪಟ್ಟಿಯಲ್ಲಿ ವಯಸ್ಸು ಮೀರಿದವರ ಹೆಸರಿದ್ದರೆ ಅಂಥವರ ಹೆಸರು ತೆಗೆದು ಹಾಕಲಾಗುವುದಲ್ಲದೇ, ಹೊಸಬರ ಹೆಸರನ್ನೂ ಸೇರಿಸಲಾಗುವುದು ಎಂದ ರೆಡ್ಡಿ, ಅಪರಾಧಿ ಕೃತ್ಯ ಎಸಗುವವರ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಅಂದಾಗ ಸಮಾಜ ಘಾತುಕ ಶಕ್ತಿ ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದರು.
ವಿಧಿ ವಿಜ್ಞಾನ ಪ್ರಯೋಗಾಲಯ: ಅಪರಾಧಿ ಕೃತ್ಯಗಳಿಗೆ ಸಂಬಂಧಿತ ಪರೀಕ್ಷೆ ಪ್ರಸ್ತುತ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಯುತ್ತಿದೆ. ಅಪರಾಧ ಪ್ರಕರಣವನ್ನು ತಕ್ಷಣಕ್ಕೆ ಭೇದಿಸುವ ನಿಟ್ಟಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ರಾಜ್ಯದ ಇನ್ನಿತರ ಭಾಗದಲ್ಲಿಯೂ ಸ್ಥಾಪನೆಯಾಗಬೇಕೆಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ವಿಭಾಗವಾರು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರ ಇಷ್ಟರಲ್ಲಿಯೇ ಪ್ರಸ್ತಾವನೆಗೆ ಮಂಜೂರಾತಿ ನೀಡಲಿದೆ ಎಂದರು.
ಸಿಬ್ಬಂದಿ ನೇಮಕ : ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಕೋರಲಾಗಿತ್ತು. ರಾಜ್ಯದಲ್ಲಿ ಸರಿಸುಮಾರು 16 ಸಾವಿರ ಪೊಲೀಸ್ ಪೇದೆಯ ಅಗತ್ಯವಿದೆ. ಈ ಪೈಕಿ ಸರ್ಕಾರ ಇದೀಗ 8500 ಪೊಲೀಸ್ ಪೇದೆಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಪೊಲೀಸ್ ಠಾಣೆಗೆ ಹೊಸ ಕಟ್ಟಡಗಳ ಬೇಡಿಕೆಯಿದ್ದು ಸರ್ಕಾರ ಹಂತ ಹಂತವಾಗಿ ಬೇಡಿಕೆ ಈಡೇರಿಸುತ್ತಿದೆ ಎಂದು ರೆಡ್ಡಿ ತಿಳಿಸಿದರು.
ಸೈಬರ್ ಕ್ರೈಂ ಸೆಲ್ : ಇದೇ ವೇಳೆ ಮಾತನಾಡಿದ ಮಹಾನಗರ ಪೊಲೀಸ್ ಆಯುಕ್ತ ಬಿ. ಎ. ಪದ್ಮನಯನ, ಅವಳಿ ನಗರದಲ್ಲಿಯೂ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ಸೆಲ್ ಬಲಪಡಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಗೆ ಪ್ರತ್ಯೇಕ ಸೈಬರ್ ಕ್ರೈಂ ಸೆಲ್ಬೇಕೆಂಬ ಬೇಡಿಕೆ ಇತ್ತು. ಅದಕ್ಕೀಗ ಹಸಿರು ನಿಶಾನೆ ದೊರೆತಿದ್ದು, ಇಷ್ಟರಲ್ಲಿಯೇ ಸೆಲ್ ಆರಂಭವಾಗಲಿದೆ. ಕೆಲ ತಜ್ಞರನ್ನು ಸೆಲ್ಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಡಿಸಿಪಿಗಳಾದ ಸುಭಾಷ ಗುಡಿಮನಿ, ಶ್ರೀನಾಥ ಜೋಶಿ ಗೋಷ್ಠಿಯಲ್ಲಿದ್ದರು.