ನಾಟಕ ಕಲೆ ಪುರಾತನ ಕಾಲದಿಂದಲೂ ಮಾಧ್ಯಮ
ಧಾರವಾಡ: ಸಾಮಾಜಿಕ, ಧಾರ್ಮಿಕ ಹಾಗೂ ಮನರಂಜನೆಯ ವಿಷಯಗಳನ್ನು ಸುಲಭವಾಗಿ ತಿಳಿಸುವ ಮಾಧ್ಯಮವಾಗಿರುವ ನಾಟಕ ಕಲೆ ಪುರಾತನ ಕಾಲದಿಂದಲೂ ಬೆಳೆದು ಬಂದಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣಾಜಿ ಚವ್ಹಾಣ ಹೇಳಿದರು.
ಗುಲಾಬಿ ಸ್ವಯಂ ಸೇವಾ ಸಂಸ್ಥೆ ಹಾಗೂ ಟೂರಿಂಗ ಟಾಕೀಸ್ ತಂಡ ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಹುಚ್ಚರ ಸಂತೆ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ನಾಟಕ ಕಲೆಯ ಬಗ್ಗೆ ಯುವ ಜನತೆಯ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಯುವಕರು ಇಂಥ ಕಲೆಗೆ ಉತ್ಸಾಹ ತೋರುವ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಬೇಕು ಎಂದು ತಿಳಿಸಿದರು. ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿ, ಒಂದು ನಾಟಕವನ್ನು ಮಾಡುವುದು ಅತಿ ಕಷ್ಟಕರ. ಅದರಲ್ಲೂ ಯುವಕರು ಈ ಕಲೆಯಿಂದ ದೂರವಾಗುತ್ತಿರುವ ಇಂಥ ಸಂದರ್ಭದಲ್ಲಿ ಈ ಹುಚ್ಚರ ಸಂತೆ ನಾಟಕ ಯುವಕರನ್ನು ಮತ್ತೆ ರಂಗಭೂಮಿಯ ಕಡೆಗೆ ಆಸಕ್ತಿವಹಿಸುವಂತೆ ಮಾಡಿದೆ ಎಂದು ತಿಳಿಸಿದರು. ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ವಿಜಯಿ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಡಾ. ಬಾಬುರಾವ ಶೇಗುಣಸಿ, ದಿನೇಶ ಶೆಟ್ಟಿ, ಅಶೋಕ ಗರಗ, ಗುಲಾಬಿ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಸವರಾಜ ಮಲ್ಲಿಗವಾಡ, ಅಸ್ಲಂಜಹಾನ ಅಬ್ಬಿಹಾಳ ಇದ್ದರು. ಬಳಿಕ ಕಲಾವಿದರಾದ ಉಮೇಶ ತೇಲಿ, ಪ್ರೇಮ್, ಮಂಜುನಾಥ, ಮಹೇಶ ಹಿರೇಮಠ ಹಾಗೂ ರಂಜಿತಾ ಜಾಧವ ಅಭಿನಯಿಸಿದ ಹುಚ್ಚರ ಸಂತೆ ಪ್ರಸ್ತುತಗೊಂಡಿತು.