ಸುದ್ದಿ ಸಂಕ್ಷೇಪ
ನಾಳೆ ವಿಶೇಷ ಉಪನ್ಯಾಸ
ಧಾರವಾಡ: ವೀರಶೈವ ಜಂಗಮ ಸಂಸ್ಥೆಯು ಆ. 29ರಂದು ನಗರದ ಆಲೂರು ವೆಂಕಟಾರಾವ್ ಸಭಾ ಭವನದಲ್ಲಿ ತಿಂಗಳ ವಿಶೇಷ ಉಪನ್ಯಾಸ ಮಾಲಿಕೆಯ 101ನೇ ಉಪನ್ಯಾಸವನ್ನು ಆಯೋಜಿಸಿದೆ. ತುಮಕೂರು ಸಿದ್ದಗಂಗಾ ಸಂಸ್ಕೃತ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಹಾಗೂ ಸಂಸ್ಕೃತ ವಿದ್ವಾಂಸ ಬಸವರಾಜು ಅವರು ಸಿದ್ಧಾಂತ ಶಿಖಾಮಣಿ - ಮನೋವಿಕಾಸ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೊರು ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಜಿ.ಆರ್. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಹ ಕಾರ್ಯದರ್ಶಿ ಡಾ. ಸುರೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕೃಷ್ಣಜನ್ಮಾಷ್ಟಮಿ
ಧಾರವಾಡ: ಇಲ್ಲಿನ ಕೆಲಗೇರಿ ರಸ್ತೆಯ ಶ್ರೀರಂಗ ಮಾಧ್ವ ವಿದ್ಯಾಪೀಠದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆ. 28ರಂದು ಸಂಜೆ 6.30ಕ್ಕೆ ಹರೀಶ ಕುಲಕರ್ಣಿ ಅವರಿಂದ ಕೊಳಲು, ಮೇಘನಾ ಜಹಗೀರದಾರ ಅವರಿಂದ ಸಂಗೀತ ಸೇವೆ, ನೃತ್ಯ ಗುರು ರೋಹಿಣಿ ಅವರ ಶಿಷ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಭಕ್ತರು ಸಮಾರಂಭದಲ್ಲಿ ಭಾಗವಹಿಸಬೇಕೆಂದು ಕಾರ್ಯದರ್ಶಿ ಪಿ.ಆರ್. ಕುಲಕರ್ಣಿ ತಿಳಿಸಿದ್ದಾರೆ.
ತ್ಯಾಜ್ಯ ಕುರಿತು ಜನಾಂದೋಲನ
ಧಾರವಾಡ: ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ಅರ್ಬನ್ ಆಂಡ್ ರೂರಲ್ ಡೆವಲೆಪ್ಮೆಂಟ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ವತಿಯಿಂದ ಆ. 29ರಂದು ತ್ಯಾಜ್ಯ ಸುಡದರಿ-ಸುಡಲು ಬಿಡದಿರಿ ಎಂಬ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕರ್ನಾಟಕ ಕಾಲೇಜಿನ ಆವರಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜನಜಾಗೃತಿ ಜಾಥಾ ಏರ್ಪಡಿಸಲಾಗಿದೆ. ತ್ಯಾಜ್ಯ ನಿರ್ವಹಣೆ ಜಾಗತಿಕ ಮಟ್ಟದಲ್ಲಿ ಬೃಹತ್ ಸಮಸ್ಯೆಯಾಗಿದ್ದು, ಸೂಕ್ತ ವೈಜ್ಞಾನಿಕ ನಿರ್ವಹಣೆಯಲ್ಲಿ ಸಮುದಾಯ ಕೈ ಜೋಡಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಸಂಗ್ಯಾ ಬಾಳ್ಯಾ ಸಣ್ಣಾಟ
ಧಾರವಾಡ: ಇಲ್ಲಿನ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಆ. 28ರಂದು ಸಂಜೆ 5.30ಕ್ಕೆ ಲಕ್ಷ್ಮೀಬಾಯಿ ನೀಲಪ್ಪನವರ ಸಾಲಹಳ್ಳಿ ಮಹಿಳಾ ತಂಡದವರಿಂದ ಸಂಗ್ಯಾ ಬಾಳ್ಯಾ ಸಣ್ಣಾಟ ಪ್ರದರ್ಶನ ನಡೆಯಲಿದೆ. ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಿ.ವಿ. ಗುಂಜೆಟ್ಟಿ ಅಧ್ಯಕ್ಷತೆ ವಹಿಸುವರು. ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸವಲಿಂಗಯ್ಯ ಹಿರೇಮಠ ಉಪನ್ಯಾಸ ನೀಡಲಿದ್ದಾರೆ.
ಇಂದು ಸಾಂಸ್ಕೃತಿಕ ಕ್ರೀಡೆ ಉದ್ಘಾಟನೆ ಕಾರ್ಯಕ್ರಮ
ಮುಂಡಗೋಡ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಕ್ರೀಡೆಗಳು ಮತ್ತು ಎನ್ಎಸ್ಎಸ್ ಚಟುವಟಿಕೆ ಉದ್ಘಾಟನಾ ಸಮಾರಂಭ ಆ. 28ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ದೈವಜ್ಞ ಸಭಾ ಭವನದಲ್ಲಿ ನಡೆಯಲಿದೆ.
ನಾಳೆ ವಚನ, ಜಾನಪದ ಹಾಡು
ಧಾರವಾಡ: ಇಲ್ಲಿನ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಆ. 29ರಂದು ಸಂಜೆ 6ಕ್ಕೆ ಶ್ರಾವಣ ಮಾಸದ ಜಾನಪದ ಹಾಡುಗಳು ಹಾಗೂ ವಚನ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ರಾಮಯ್ಯ ಮಠಪತಿ ವಚನ ಸಂಗೀತ ಪ್ರಸ್ತುತ ಪಡಿಸಲಿದ್ದು, ಪಾರ್ವತಿ ಹೊಂಗಲ ಶ್ರಾವಣ ಮಾಸದ ಜಾನಪದ ಹಾಡುಗಳನ್ನು ಹಾಡಲಿದ್ದಾರೆ. ಸುಮಂಗಲಾ ಅಂಗಡಿ ಅಧ್ಯಕ್ಷತೆ ವಹಿಸುವರು. ಜನಪದ ತಜ್ಞ ಬಸವಲಿಂಗಯ್ಯ ಹಿರೇಮಠ ಅತಿಥಿಗಳಾಗಿ ಭಾಗಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಂಸದೆ ರಮ್ಯಾಗೆ ಅಭಿನಂದನೆ
ಧಾರವಾಡ: ಲೋಕಸಭಾ ಉಪಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾದ ನಟಿ ರಮ್ಯಾ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರು ಅಂಗಡಿ ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿದ್ದು, ಅದನ್ನು ಗೌರವಿಸುವುದು ಮತ್ತು ಪೋಷಿಸುವುದು ಕನ್ನಡ ಜನತೆಯ ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.