8 ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಜಾಮರ್
ಹುಬ್ಬಳ್ಳಿ: ಅಕ್ರಮ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ರಾಜ್ಯದ 8 ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗುವುದು ಎಂದು ಬಂಧಿಖಾನೆ ಎಡಿಜಿಪಿ ಕೆ.ವಿ. ಗಗನದೀಪ್ ಹೇಳಿದರು. ಇಲ್ಲಿಯ ವಿಶ್ವೇಶ್ವರನಗರದಲ್ಲಿರುವ ಉಪಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಿದ್ದು, ಸೆ.10ರಿಂದ ಕಾರ್ಯಾರಂಭ ಮಾಡಲಿದೆ. ಬಳ್ಳಾರಿ ಕಾರಾಗೃಹದಲ್ಲಿ ಅಕ್ಟೋಬರ್‌ನಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗುವುದು ಎಂದರು. ಶಿವಮೊಗ್ಗದಲ್ಲಿ ನೂತನ ಕೇಂದ್ರ ಕಾರಾಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಜ್ಯದ ಯಾವುದೇ ಕೇಂದ್ರ ಜೈಲುಗಳ ಸ್ಥಳಾಂತರ ನಡೆಸಲಾಗುವುದಿಲ್ಲ ಎಂದರು. ಉತ್ತರ ಕನ್ನಡ ಜಿಲ್ಲೆಯ ಹಳ್ಯಾಳದಲ್ಲಿ 4 ಎಕರೆ ಜಾಗದಲ್ಲಿ ಹೊಸ ಕಾರಾಗೃಹ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ರಾಜ್ಯದ ಎಲ್ಲ ಜೈಲುಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.