ಒಳಚರಂಡಿ ಕಾಮಗಾರಿ ಜನವರಿಗೆ ಪೂರ್ಣ
ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ನಿರ್ಮಾಣ ಕಾಮಗಾರಿ 2014ರ ಜನವರಿಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ತಿಳಿಸಿದ್ದಾರೆ.
ನಗರದ ವಿವಿಧೆಡೆ ಒಳಚರಂಡಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ನಂತರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿಯೂ ಒಳಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಎರಡು ಹಂತದಲ್ಲಿ ಬೃಹತ್ ಒಳಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದ 35.5 ಕಿ.ಮೀ. ಕಾಮಗಾರಿಯಲ್ಲಿ ಕೆಯುಐಡಿಎಫ್ಸಿ 20 ಕಿ.ಮೀ. ಹಾಗೂ ಮಹಾನಗರ ಪಾಲಿಕೆ 8.5 ಕಿ.ಮೀ. ಉದ್ದದ ಒಳಚರಂಡಿ ನಿರ್ಮಿಸಿದೆ. 2ನೇ ಹಂತದ ಒಟ್ಟು 59.81 ಕಿ.ಮೀ. ಕಾಮಗಾರಿಯಲ್ಲಿ ಕೆಯುಐಡಿಎಫ್ಸಿ 36.5 ಕಿ.ಮೀ. ಹಾಗೂ ಪಾಲಿಕೆ 12 ಕಿ.ಮೀ. ಉದ್ದದ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿದೆ. ಒಟ್ಟು 95.34 ಕಿ.ಮೀ. ಉದ್ದದ ಒಳಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಇದುವರೆಗೆ 77 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಂಡಿದ್ದು, 17.5 ಕಿ.ಮೀ. ಉದ್ದದ ಕಾಮಗಾರಿಯಷ್ಟೇ ಬಾಕಿ ಉಳಿದಿದೆ. ಧಾರವಾಡದ ಒಟ್ಟು 42.5 ಕಿ.ಮೀ. ಒಳಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಇದುವರೆಗೆ 11 ಕಿ.ಮೀ.ನಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹುಬ್ಬಳ್ಳಿಯಲ್ಲಿ ರು. 84 ಕೋಟಿ ಹಾಗೂ ಧಾರವಾಡದಲ್ಲಿ ರು. 29 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಒಳಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ಹದಗೆಟ್ಟಿರುವ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಒಳಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಈಗಲ್ ಕನಸ್ಟ್ರಕ್ಷನ್ ಏಜನ್ಸಿಗೆ ಇದುವರೆಗೆ ರು. 30 ಲಕ್ಷ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಳಚರಂಡಿ ನಿರ್ಮಾಣ ಕಾಮಗಾರಿ ಸಂಪೂರ್ಣ ತೃಪ್ತಿಕರವಾಗಿಲ್ಲ. ಕಾಮಗಾರಿ ನಂತರ ರಸ್ತೆ ಮರುನಿರ್ಮಿಸುವಲ್ಲಿ ಗುತ್ತಿಗೆದಾರರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದರಿಂದ ವಾಹನ ಹಾಗೂ ಜನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಸದ್ಯಕ್ಕೆ ಇನ್ನೂ ಎರಡು ಮಳೆ ಸುರಿಯುವವರೆಗೆ ಗುಣಮಟ್ಟದ ಡಾಂಬರ ರಸ್ತೆ ನಿರ್ಮಾಣ ಅಸಾಧ್ಯ. ಆದರೆ ಅದುವರೆಗೆ ರಸ್ತೆಗೆ ಮೊರಂ ಹಾಕಿ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಡಿಸಿ ಶುಕ್ಲಾ ತಿಳಿಸಿದರು.
ಸ್ಟೇಶನ್ ರಸ್ತೆ, ಮರಾಠಾಗಲ್ಲಿ, ನೆಹರುಮೈದಾನ ಎದುರಿನ ರಸ್ತೆ, ಪೆಂಡಾರ ಓಣಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಒಳಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಕಾಮಗಾರಿ ನಂತರ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯನ್ನು ಜಿಲ್ಲಾಧಿಕಾರಿ ಸಮೀರ ಶುಕ್ಲಾ ಇದಕ್ಕೂ ಮೊದಲು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯರೊಂದಿಗೆ ಮಾತನಾಡಿ, ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಆಗುತ್ತಿರುವ ತೊಂದರೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತಾವು ಪ್ರತಿ ಗುರುವಾರ ಹುಬ್ಬಳ್ಳಿ ನಗರ ಭೇಟಿ ಸಂದರ್ಭದಲ್ಲಿ ನಿಯತವಾಗಿ ಒಳಚರಂಡಿ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಇನ್ನೂ ವಾರೊಪ್ಪತ್ತಿನಲ್ಲಿ ಒಳಚರಂಡಿ ನಿರ್ಮಿಸಲಾಗಿರುವ ಕಡೆಗಳಲ್ಲಿನ ರಸ್ತೆ ಮೆಟಲಿಂಗ್ ಕಾರ್ಯ ಪೂರ್ಣಗೊಳಿಸಿ ಸಂಚಾರ ಸುಗಮಗೊಳಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ಸಂಸ್ಥೆಯ ಕಾರ್ಯನಿರ್ವಾಹಕ ಅಭಿಯಂತರ ಎಲ್ . ಆರ್. ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಸ್. ಎಲ್. ಪಾಟೀಲ ಹಾಗೂ ಹೊನ್ನಕೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.