ಕಸ ಸಮಸ್ಯೆ: ಜನರಲ್ಲಿರಲಿ ಇಚ್ಛಾಶಕ್ತಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 29
'ಎಲ್ಲಿ ಬೇಕೆಂದರಲ್ಲಿ ಉಗುಳುವುದು, ಬಯಲು ಮಲ, ಮೂತ್ರ ವಿಸರ್ಜನೆ, ಖಾಲಿ ಜಾಗದಲ್ಲಿ ಎಸೆಯುವ ಕಸ, ಇಂತಹ ಕೆಟ್ಟ ಪ್ರವೃತ್ತಿಯಿಂದಾಗಿ ಪರಿಸರದ ಶುಚಿತ್ವ ಹಾಳಾಗುವುದರ ಜೊತೆಗೆ ಬೀದಿ ನಾಯಿಗಳ ಸಂತಾನ ಕೂಡ ಹೆಚ್ಚಾಗುತ್ತದೆ.'
ಮಹಾನಗರದಲ್ಲಿ ಹೆಚ್ಚಿರುವ ಕಸದ ಸಮಸ್ಯೆಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ, ಕಿಮ್ಸ್ ಆಡಳಿತ ಮಂಡಳಿ ನಿರ್ದೇಶಕ ಮತ್ತು ಮಧುಮೇಹ ಹಾಗೂ ಹೃದಯ ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಅವರು ನೀಡಿದ ಪ್ರಮುಖ ಕಾರಣಗಳಿವು.
'ಕನ್ನಡಪ್ರಭ' ಪ್ರಾರಂಭಿಸಿರುವ 'ಕಸ ಮುಕ್ತಿ ಹೇಗೆ?' ವಿಶೇಷ ಸರಣಿಗಾಗಿ ನೀಡಿರುವ ಸಂದರ್ಶನದಲ್ಲಿ ಡಾ. ಜಿ.ಬಿ. ಸತ್ತೂರ ಅವರು ಕಸದ ನಿರ್ವಹಣೆಗೆ ಹಲವಾರು ಸಲಹೆ ನೀಡಿದ್ದಾರೆ.
ನಾಗರಿಕರಲ್ಲಿ ಕಾಣದ ನಾಗರಿಕ ಪ್ರಜ್ಞೆಯೇ ನಗರ ಪ್ರದೇಶಗಳು ಕಸದ ತೊಟ್ಟಿಯಂತಾಗಲು ಪ್ರಮುಖ ಕಾರಣವೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಡಾ. ಸತ್ತೂರ ಅವರ ಸಂದರ್ಶನದ ಸಾರಾಂಶ ಹೀಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೂ ನೂರು ಕೋಟಿ ರು. ಅನುದಾನ ದೊರಕಿದೆ. ಅದೇ ರೀತಿ ಮೈಸೂರು, ಶಿವಮೊಗ್ಗಕ್ಕೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಇಷ್ಟೇ ಅನುದಾನ ನೀಡಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ಕೈಗೆತ್ತಿಕೊಂಡ ಒಳಚರಂಡಿ ಕೆಲಸ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ. ನಾನು 30 ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಾಗಿನ ಸಮಯದಲ್ಲಿದ್ದ ರಸ್ತೆಗಳಿಗೂ ಇಂದಿನ ರಸ್ತೆಗಳಿಗೂ ವ್ಯತ್ಯಾಸವೇ ಇಲ್ಲ. ನಾಗರಿಕರಲ್ಲಿ ಕಾಣದ ನಾಗರಿಕ ಪ್ರಜ್ಞೆ ಜೊತೆಗೆ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರಗಳು ಕೂಡ ವ್ಯವಸ್ಥೆ ಸರಿಪಡಿಸುವಲ್ಲಿ ವಿಫಲವಾಗಿವೆ.
ಸಂಪರ್ಕ ಕೊರತೆ: ಕಸ ಸಮಸ್ಯೆ ಉಂಟಾಗಲು ಇನ್ನೊಂದು ಮುಖ್ಯ ಕಾರಣ ಎಂದರೆ ಇಲಾಖೆಗಳ ಮಧ್ಯೆ ಸಂಪರ್ಕಗಳ ಕೊರತೆ. ದೂರಸಂಪರ್ಕ ಮತ್ತು ಹೆಸ್ಕಾಂ ಸೇರಿದಂತೆ ಕೆಲವು ಇಲಾಖೆಗಳು ರಸ್ತೆ ಅಗೆದು ವೈರ್, ಕೇಬಲ್ ಹಾಕುತ್ತಾರೆ. ಆದರೆ, ಈ ಕೆಲಸ ಮಾಡುವ ಮುನ್ನ ಮಹಾನಗರ ಪಾಲಿಕೆಗೆ ಮಾಹಿತಿ ನೀಡುವುದೇ ಇಲ್ಲ. ಹೀಗಾಗಿ ಅಗೆದ ರಸ್ತೆಗಳಲ್ಲಿ ತೆಗ್ಗು ಗುಂಡಿಗಳು ನಿರ್ಮಾಣವಾಗುತ್ತವೆ. ರಸ್ತೆ ಅಗೆಯುವ ಕೆಲಸ ಕೆಲವೊಮ್ಮೆ ನಾಗರಿಕರಿಂದ ಕೂಡ ಆಗುತ್ತದೆ. ನಳದ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಅಗೆಯುವ ರಸ್ತೆಯನ್ನು ರಿಪೇರಿ ಮಾಡಬೇಕು ಎನ್ನುವ ಪರಿಜ್ಞಾನ ನಾಗರಿಕರಲ್ಲಿ ಇರುವುದಿಲ್ಲ. ಈ ರೀತಿ ರಸ್ತೆಗಳನ್ನು ಅಗೆದ ಸಂದರ್ಭದಲ್ಲಿ ನಿಗದಿತ ಸಮಯದಲ್ಲಿ ಆ ರಸ್ತೆ ಸರಿಪಡಿಸಬೇಕು ಎಂದು ಮಹಾನಗರ ಪಾಲಿಕೆ ತಾಕೀತು ಮಾಡಬೇಕು. ಒಂದು ವೇಳೆ ಮಾಡದಿದ್ದರೆ ದಂಡ ವಿಧಿಸಬೇಕು.
ಎಲ್ಲ ಕೆಲಸವನ್ನೂ ಸರ್ಕಾರವೇ ಮಾಡಬೇಕು. ಎಲ್ಲ ಅವ್ಯವಸ್ಥೆಗಳಿಗೆ ಸರ್ಕಾರವೇ ಕಾರಣ ಎಂದು ದೂರಿದರೆ ಪ್ರಯೋಜನವಿಲ್ಲ. ಪ್ರತಿಯೊಂದು ಮನೆಯಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಮಳೆ ಕೊಯ್ಲು ಇರಲೇಬೇಕು ಎಂದು ಪಾಲಿಕೆ ಕಡ್ಡಾಯ ಮಾಡಬೇಕು. ಮಳೆ ಕೊಯ್ಲು ವಿಧಾನ ಅಳವಡಿಸಿಕೊಳ್ಳದಂತಹ ಮನೆಗಳಿಗೆ ಕನಿಷ್ಠ 50 ಸಾವಿರ ದಂಡ ವಿಧಿಸಬೇಕು. ಅಂದರೆ ಮಾತ್ರ ಹೊಸತಾಗಿ ನಿರ್ಮಿಸಿರುವ ಮನೆಗಳಿಗೆ ಮಳೆ ಕೊಯ್ಲು ತಂತ್ರಜ್ಞಾನ ಅಳವಡಿಕೆಯಾಗುತ್ತದೆ.
ಹುಬ್ಬಳ್ಳಿ ನಗರದಲ್ಲಿ ಕಾಣುವ ಇನ್ನೊಂದು ಅತಿದೊಡ್ಡ ಸಮಸ್ಯೆ ಎಂದರೆ ಧೂಳು. ಮಳೆಗಾಲ ಮುಗಿದ ಕೂಡಲೇ ರಸ್ತೆ ಮೇಲೆ ಬಂದು ಬೀಳುವ ಮಣ್ಣಿನಿಂದ ಉತ್ಪತ್ತಿಯಾಗುವ ಧೂಳಿನಿಂದ ಸಮುದಾಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಧೂಳಿನಿಂದ ಅಸ್ತಮಾ, ಅಲರ್ಜಿ, ಮೂಗು ಕಟ್ಟುವಿಕೆ ಮತ್ತು ಪುಪ್ಪುಸದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರೆ ನಗರಾದ್ಯಂತ ಒಂದು ತುದಿಯಿಂದ ಇನ್ನೊಂದು ತುದಿವರೆಗೆ ಸಿಮೆಂಟ್ ರಸ್ತೆ ನಿರ್ಮಾಣವಾಗಬೇಕು.
ಕಸ ಸಂಗ್ರಹದಲ್ಲಿ ವೈಜ್ಞಾನಿಕ ವಿಧಾನ ಬೇಕು ಎಂದು ಪ್ರತಿಪಾದಿಸುವ ಡಾ. ಸತ್ತೂರ, ಪಾಲಿಕೆಯ ಈಗಿನ ವಿಧಾನ ಅಲ್ಲಲ್ಲಿ ಕಸದ ತೊಟ್ಟಿಗಳ ನಿರ್ಮಾಣ ಇಲ್ಲವೇ ಕಂಟೇನರ್ಗಳನ್ನು ಇರಿಸುವುದರಿಂದ ಸಮಸ್ಯೆ ಪರಿಹಾರವಾಗುವ ಬದಲು ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಿದೆ. ಹೆಚ್ಚಿನ ಜನರು ತೊಟ್ಟಿಯಲ್ಲಿ ಕಸ ಹಾಕದೇ ಅದರ ಬದಿಗೆ ಹಾಕುತ್ತಾರೆ. ಇದರಿಂದ ಬೀಡಾಡಿ ನಾಯಿಗಳು ಮತ್ತು ಹಂದಿಗಳಿಗೆ ಪರೋಕ್ಷವಾಗಿ ಆಶ್ರಯ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ಡಾ. ಸತ್ತೂರ ಅವರದ್ದು.
ಸತೀಶ ಎನ್. ಪಾಗಾದ