ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಮಾನತಾದ ಪ್ರಾಧ್ಯಾಪಕರನ್ನು ವಾಪಸ್ ಕರೆಸಿ

Mainashree
Updated On : 31 Aug 2013, 10:31 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 30
ಇಲ್ಲಿನ ಪ್ರತಿಷ್ಠಿತ ಕಿಟೆಲ್ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಪ್ರಾಧ್ಯಾಪಕರು ಆಡಳಿತ ಮಂಡಳಿಗೆ ಬೇಡವಾದ ಕಾರಣ ಶುಕ್ರವಾರ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಕಿಟೆಲ್ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಜಿ.ಆರ್. ವಿಕ್ಟರ್ ಅವರನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ಉತ್ತಮ ಪ್ರಾಧ್ಯಾಪಕರಾಗಿರುವ ಅವರಿಗೆ ಪ್ರಾಚಾರ್ಯ ಹುದ್ದೆ ತಪ್ಪಿಸಬೇಕೆಂಬ ದುರುದ್ದೇಶದಿಂದ ಬಾಸೆಲ್ ಮಿಶನ್ ಹೈಯರ್ ಎಜ್ಯುಕೇಶನ್ ಸೆಂಟರ್‌ನ ಆಡಳಿತ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ. ಆಡಳಿತ ಮಂಡಳಿ ಕೂಡಲೇ ತನ್ನ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕೆಂದು ಕಾಲೇಜಿನಿಂದ ಇಲ್ಲಿನ ರಪಾಟಿ ಕಲ್ಯಾಣ ಮಂಟಪದ ಎದುರಿಗೆ ಇರುವ ಆಡಳಿತ ಮಂಡಳಿ ಮುಖ್ಯಸ್ಥ ರೆ. ರವಿಕುಮಾರ ನಿರಂಜನ ಅವರ ನಿವಾಸದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಬಗ್ಗೆ ಪ್ರಾಚಾರ್ಯೆ ಸುಶಾಂತಿ ಅವರು ಹೇಳುವುದೇ ಬೇರೆ. ಅವರ ಅಮಾನತ್ತಿಗೂ ಪ್ರಾಚಾರ್ಯ ಹುದ್ದೆಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ಟರ್ ಅವರಿಗೆ ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ಉತ್ತರವನ್ನು ನೀಡುವಾಗ ಅಸಹಜ ನಡುವಳಿಕೆ ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ಈ ಪ್ರಾಧ್ಯಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಯುಕ್ತರು ಸೂಚಿಸಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕ್ರಮ ತೆಗೆದುಕೊಂಡಿದೆ. ಈ ವೇಳೆ ಓರ್ವ ಪ್ರಾಧ್ಯಾಪಕರಾಗಿ ತರಗತಿಯಲ್ಲಿನ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಪ್ರತಿಭಟಿಸುವುದು ತಪ್ಪು. ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡುವುದಾಗಿ ಪ್ರಾಚಾರ್ಯರು ಹೇಳಿದ್ದಾರೆ.
ಈ ಕುರಿತು ವಿಚಾರ ಮಾಡಿ ನಿರ್ಣಯ ಕೈಗೊಳ್ಳುವುದಾಗಿ ರೆ. ರವಿಕುಮಾರ ಭರವಸೆ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement