ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳರ ಬಂಧನ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 30
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ದಾವಣಗೆರೆಗಳ ಪ್ರತಿಷ್ಠಿತ ಕಾರ್ ಹಾಗೂ ಬೈಕ್ ಶೋರೂಂಗಳಲ್ಲಿ ಇತ್ತೀಚೆಗೆ ನಡೆದ ಕಳ್ಳತನದ ಜಾಲವನ್ನು ಇಲ್ಲಿನ ವಿದ್ಯಾಗಿರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ ಆಯುಕ್ತ ಬಿ.ಎ. ಪದ್ಮನಯನ, ರು. 15 ಲಕ್ಷ ಮೌಲ್ಯದ ಎಲ್ಸಿಡಿ ಟಿವಿ, ಕಂಪ್ಯೂಟರ್ ಮಾನಿಟರ್, ಲ್ಯಾಪಟಾಪ್ಗಳನ್ನು ವಶಪಡಿಸಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಹುಬ್ಬಳ್ಳಿ- ಧಾರವಾಡದ ಏಳು, ಬೆಳಗಾವಿಯ ಏಳು ಹಾಗೂ ದಾವಣಗೆರೆಯ ಉಜ್ವಲ ಶೋರೂಂ ಸೇರಿದಂತೆ ಅನೇಕ ಬೈಕ್ ಹಾಗೂ ಕಾರ್ ಶೋರೂಂಗಳಲ್ಲಿ ರಾತ್ರಿ 2 ರಿಂದ 4ರ ಹೊತ್ತಿಗೆ ಹಿಂಬದಿ ಬಾಗಿಲು ಅಥವಾ ಕಿಟಕಿ ಮೂಲಕ ಒಳ ಪ್ರವೇಶಿಸಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವಳಿ ನಗರದ ಪೊಲೀಸರಿಗೆ ಎಚ್ಚರದಿಂದ ಇರಲು ಆದೇಶಿಸಲಾಗಿ ಆ. 29ರಂದು ಕೆಎಂಎಫ್ ಹತ್ತಿರ ವಾಹನಗಳ ತಪಾಸಣೆ ಸಂದರ್ಭದಲ್ಲಿ ಬೈಕ್ ಮೇಲಿಂದ ಬಂದ ಇಬ್ಬರು ಬಟ್ಟೆಯಿಂದ ಮುಚ್ಚಿಕೊಂಡು ಎಲ್ಸಿಡಿ ಟಿ.ವಿ. ಒಯ್ಯುತ್ತಿದ್ದರು. ಸಂಶಯದ ಆಧಾರದ ಮೇಲೆ ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಗುರು ಮತ್ತೂರು ಹಾಗೂ ಪಿಎಸ್ಐ ಪರಶುರಾಮ ಪೂಜೇರ ಸೇರಿದಂತೆ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಜಾಲ ಹೊರ ಬಿದ್ದಿದೆ ಎಂದು ಪದ್ಮನಯನ ಹೇಳಿದರು.
ಬಂಧಿತರಿವರು: ಬೆಳಗಾವಿಯ ಮುಕ್ತಿಮಠದ ಲಕ್ಷ್ಮಣ ಮಾರುತಿ ನಾಯಕ, ಸುರೇಶ ಮಾರುತಿ ನಾಯಕ ಎಂಬ ಇಬ್ಬರು ಸಹೋದರರನ್ನು ಬಂಧಿಸಿ ವಿಚಾರಿಸಿದಾಗ ಇವರು ಕದ್ದೊಯ್ದು ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿ ಕಿರಣ ಶಂಕರಷಾ ಖೋಡೆ, ಮೊಹಮ್ಮದ ಆರೀಫ ಶೇಖ ಹಾಗೂ ಬೆಳಗಾವಿಯ ಮುಬಾರಕ ಶೇಖ್ ಎಂಬುವರು ಸಿಕ್ಕಿ ಬಿದ್ದಿದ್ದಾರೆ. ಇವರಿಂದ 3 ಎಲ್ಸಿಡಿ ಟಿ.ವಿ., 21 ಕಂಪ್ಯೂಟರ್ ಮಾನಿಟರ್, 22 ಸಿಪಿಯು, 3 ಲ್ಯಾಪ್ಟಾಪ್, ಒಂದು ನೋಟ್ ಎಣಿಸುವ ಯಂತ್ರಗಳು ಸೇರಿದಂತೆ ಅವರು ಬಳಸುತ್ತಿದ್ದ ಟಾಟಾ ಏಸ್, ಫೋರ್ಡ್ ಕಾರು ಹಾಗೂ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಮಾಡಿದ ಇನ್ನಷ್ಟು ಕಳ್ಳತನಗಳ ಬಗ್ಗೆಯೂ ಮಾಹಿತಿ ಸಿಗುವ ದೃಷ್ಟಿಯಿಂದ ಐದು ದಿನಗಳ ಕಾಲ ಪೊಲೀಸ್ ವಿಚಾರಣೆಯಲ್ಲಿದ್ದು ನಂತರ ನ್ಯಾಯಾಂಗದ ಬಂಧನಕ್ಕೆ ಕಳುಹಿಸಲಾಗುವುದು ಎಂದರು.
ಇದೇ ರೀತಿ ಅವಳಿ ನಗರದಲ್ಲಿ ಇತ್ತೀಚೆಗೆ ಮನೆ ಕಳ್ಳತನಗಳು ನಡೆದಿದ್ದು, ಪ್ರಕರಣ ಭೇದಿಸಲು ಈಗಾಗಲೇ ವಿಶೇಷ ತಂಡಗಳ ರಚನೆ ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ. ಲಕ್ಷ ಅಥವಾ ಕೋಟಿಗಟ್ಟಲೇ ಖರ್ಚು ಮಾಡಿ ಮನೆ ನಿರ್ಮಿಸಿಕೊಳ್ಳುತ್ತಾರೆ. ಆದರೆ, ಮನೆಗೆ ಬೇಕಾದ ರಕ್ಷಣೆ ಪಡೆಯುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ಮನೆ ಮಾಲೀಕರು ತುಸು ಎಚ್ಚರ ವಹಿಸಿದರೆ ಕಳ್ಳತನವಾಗುವುದು ಕಡಿಮೆ ಎಂದು ಹೇಳಿದರು. ಸಹಾಯಕ ಪೊಲೀಸ್ ಆಯುಕ್ತರಾದ ಎಸ್.ಬಿ. ಮಾಸ್ತಮರ್ಡಿ, ಎಸ್.ಎನ್. ಹೊಳೆಹೂಸೂರ ಇದ್ದರು.