ಕಳಪೆ ಗೋವಿನಜೋಳ ವಿತರಣೆ: ಆರೋಪ
ಧಾರವಾಡ: ನಗರದ ಮಾರುಕಟ್ಟೆಯಲ್ಲಿನ ಮೃತ್ಯುಂಜಯ ಸಿಡ್ಸ್ ಮಳಿಗೆಯಲ್ಲಿ ಖರೀದಿಸಿ ಬಿತ್ತನೆ ಮಾಡಿದ ಗೋವಿನಜೋಳ ಕಳಪೆಯಾಗಿದೆ ಎಂದು ಆರೋಪಿಸಿ ತಾಲೂಕಿನ ಮನಸೂರ ಗ್ರಾಮದ ಕೆಲ ರೈತರು ಮಳಿಗೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಮಳಿಗೆಯಲ್ಲಿ ಖರೀದಿಸಿದ ಅನ್ನದಾತ ಆಕ್ಷನ್ ಗೋವಿನಜೋಳ ಬೀಜಕ್ಕೆ ಎಲ್ಲ ರೀತಿಯ ಉಪಚಾರ ಮಾಡಿದರೂ ಬೆಳೆದಿಲ್ಲ. ಇದರಿಂದಾಗಿ ರೈತರು ಮತ್ತೆ ಸಾಲದ ಸುಳಿಯಲ್ಲಿ ಸಿಲುಕಿದಂತಾಗಿದೆ. ಅಂಗಡಿಕಾರರು ರೈತರಿಗೆ ಕಳಪೆ ಬೀಜ ವಿತರಣೆ ಮಾಡಿ ರೈತರನ್ನು ವಂಚನೆಗೊಳಿಸಿದ್ದಾರೆ ಎಂದು ರೈತರು ಆರೋಪಿಸಿದರು.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೈತ ಹಾಲಪ್ಪ ಕುರಬದ, ತಾವು ಈ ಮಳಿಗೆಯಲ್ಲಿ 12 ಪ್ಯಾಕೇಟ್ ಗೋವಿನಜೋಳ ಬೀಜಗಳನ್ನು ಖರೀದಿಸಿ 10 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದೆ. ಆದರೆ, ಬೀಜ ಕಳಪೆಯಾದ್ದರಿಂದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿವೆ ಎಂದು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಳಿಗೆ ಮಾಲೀಕ ಪ್ರಭು ನಡಕಟ್ಟಿ, ರೈತರು ತಂದ ಬೆಳೆಗಳನ್ನು ಸದ್ಯ ತಪಾಸಣೆಗಾಗಿ ಕಳುಹಿಸಲಾಗಿದೆ. ಅಲ್ಲದೆ, ಇದು ತಾವು ನೀಡಿದ ಬೀಜಗಳ ಸಮಸ್ಯೆಯಲ್ಲ. ಬಿತ್ತನೆ ಮಾಡಿದ ನಂತರ ರೈತರು ಬೆಳೆಗಳನ್ನು ಸೂಕ್ತ ಆರೈಕೆ ಮಾಡಿಲ್ಲ. ಹಾಗಾಗಿ, ಬೆಳೆಗಳಿಗೆ ರೋಗ ಅಂಟಿಕೊಂಡಿದ್ದು, ಇದು ಕಳಪೆ ಬೀಜವಲ್ಲ ಎಂದು ಅವರು ಸ್ಪಷ್ಟಪಡಿದರು.