ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗ್ರಾಮೀಣ ರಸ್ತೆ ಸ್ಥಿತಿ ದೇವರಿಗೆ ಪ್ರೀತಿ...!

Mainashree
Updated On : 31 Aug 2013, 10:32 am

ಕನ್ನಡಪ್ರಭ ವಾರ್ತೆ, ಧಾರವಾಡ, ಆ. 30
ಮೊಣಕಾಲು ವರೆಗೂ ತಗ್ಗು, ದಾರಿಯುದ್ದಕ್ಕೂ ಕಲ್ಲು-ಮುಳ್ಳುಗಳ ರಾಶಿ. ಎರಡು ಮಾರಿನಷ್ಟು ಸಹ ಅಗಲವಿರದ ಗಿಡ-ಕಂಟಿಗಳಿಂದ ತುಂಬಿದ ರಸ್ತೆಗಳಲ್ಲೇ ಎತ್ತು-ಚಕ್ಕಡಿಗಳೊಂದಿಗೆ ರೈತರ ಸವಾರಿ... ಇವು ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿನ ಹೊಲಗಳಿಗೆ ಹೋಗುವ ರಸ್ತೆಗಳ ಸ್ಥಿತಿ.
ಚುನಾವಣೆ ಸಂದರ್ಭದಲ್ಲಿ ರೈತರ ಎಲ್ಲ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಭರವಸೆ ನೀಡಿ ಮತ ಗಿಟ್ಟಿಸಿಕೊಂಡು ಅಧಿಕಾರದ ಗದ್ದುಗೆ ಏರಿದ ಜನಪ್ರತಿನಿಧಿಗಳಿಗೆ ಇದೀಗ ರೈತರ ಸಮಸ್ಯೆಗಳು ನೆನಪಾಗುತ್ತಿಲ್ಲ. ಬೆಂಬಲ ಬೆಲೆ ಸೇರಿದಂತೆ ಹೊಲಗಳಿಗೆ ಹೋಗುವ ರಸ್ತೆಗಳ ಸುಧಾರಣೆ ಮಾಡಿದರೆ ಸಾಕು, ಮತ್ತೇನು ಬೇಡ ಎನ್ನುವ ರೈತರ ಭಾವನೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ.
ಹಳ್ಳಗಳಿಗೆ ಸೇತುವೆ ನಿರ್ಮಿಸಿ: ಸದ್ಯ ನಗರ ಪ್ರದೇಶದಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೆಲ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಹದಗಟ್ಟಿವೆ. ಇದಕ್ಕಿಂತ ಹೆಚ್ಚಾಗಿ ರೈತರು ಹೊಲಗಳಿಗೆ ಹೋಗುವ ರಸ್ತೆಗಳಂತೂ ಹೇಳ ತೀರದಾಗಿವೆ. ಮಳೆಗಾಲದಲ್ಲಂತೂ ಜೀವ ಕೈಯಲ್ಲಿ ಹಿಡಿದು ಹೊಲಗಳಿಗೆ ಹೋಗುವ ಸ್ಥಿತಿ ರೈತರದ್ದು. ಧಾರವಾಡ ಜಿಲ್ಲಾದ್ಯಂತ ಬೆಣ್ಣಿಹಳ್ಳ, ತುಪರಿಹಳ್ಳಗಳು ಸೇರಿದಂತೆ ಸಣ್ಣ ಪುಟ್ಟ ಹಳ್ಳಗಳು ಹರಿದಿವೆ. ಮಳೆಗಾಲದಲ್ಲಿ ಇವುಗಳನ್ನು ದಾಟಿ ತಮ್ಮ ಹೊಲಗಳಿಗೆ ಹೋಗುವುದು ಸಾಮಾನ್ಯದ ಮಾತಲ್ಲ. ಪ್ರಮುಖ ಹಳ್ಳಗಳಿಗೆ ಚಿಕ್ಕದಾದ ಸೇತುವೆಗಳನ್ನು ನಿರ್ಮಿಸುವ ಅಗತ್ಯವಿದೆ.
ಗಿಡ-ಕಂಟಿಗಳು ರಸ್ತೆಯಲ್ಲಿ ಬೆಳೆದಿವೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗ್ರಾಮೀಣ ಪ್ರದೇಶದ ರಸ್ತೆಗಳ ಸುಧಾರಣೆಗೆ ಕೋಟಿಗಟ್ಟಲೇ ಅನುದಾನ ಬಿಡುಗಡೆಯಾಗುತ್ತಿದೆ. ಆದರೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಇವ್ಯಾವು ಗ್ರಾಮಗಳಿಗೆ ಅನ್ವಯವಾಗುತ್ತಿಲ್ಲ. ಹಾಗಾಗಿ, ರೈತರು ನಗರ ಹಾಗೂ ಹೊಲಗಳಿಗೆ ಹೋಗುವ ಸಂದರ್ಭದಲ್ಲಿ ತೀವ್ರ ತೊಂದರೆ ಅನುಭವಿಸಬೇಕಾಗಿದೆ. ರಸ್ತೆ ಸಂಪರ್ಕ ಸರಿಯಾಗಿಲ್ಲದ್ದರಿಂದ ರೈತರು ಬೆಳೆದ ಫಸಲನ್ನು ಮಾರುಕಟ್ಟೆಗೆ ತರಲು ಹರಸಾಹಸ ಪಡಬೇಕಿದೆ.
ಸದ್ಯ ಹೊಲಗಗಳಿಗೆ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಹೋಗುವ ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಅಲ್ಲದೇ, ಗಿಡ-ಕಂಟಿಗಳು ರಸ್ತೆಯ ಮಧ್ಯೆ ಬೆಳೆದಿವೆ. ಇಂಥ ರಸ್ತೆಯಲ್ಲಿ ಮನುಷ್ಯರೇ ಹೋಗುವುದು ಕಷ್ಟಕರ ಅಂತಹುದರಲ್ಲಿ ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್‌ಗಳು ಸಾಗುವುದು ಅಸಾಧ್ಯದ ಮಾತಾಗಿದೆ.
ರಸ್ತೆಗಾಗಿ ಸಂಘರ್ಷ: ಹೊಲಗಳನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ನಿತ್ಯ ವ್ಯವಸಾಯಕ್ಕಾಗಿ ಹೊಲಕ್ಕೆ ಹೋಗಲೇಬೇಕು. ಅವರ ಜೊತೆಗೆ ಎತ್ತು ಚಕ್ಕಡಿ ಹಾಗೂ ವ್ಯವಸಾಯಕ್ಕೆ ಬೇಕಾಗದ ಅಗತ್ಯ ಸಾಮಗ್ರಿ ತೆಗೆದುಕೊಂಡು ಹೋಗಬೇಕು. ಆದರೆ, ಇಂಥ ಕೆಟ್ಟ ರಸ್ತೆಯಲ್ಲಿ ಎತ್ತಿನ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಸಾಮಗ್ರಿ ಸಾಗಿಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಎತ್ತುಗಳನ್ನು ಕೈಯಲ್ಲಿ ಹಿಡಿದುಕೊಂಡು ಸಾಮಗ್ರಿಗಳನ್ನು ರೈತರೇ, ಹೆಗಲ ಮೇಲೆ ಹೊತ್ತು ಒಂದೊಂದಾಗಿ ಹೊಲಗಳಿಗೆ ತಲುಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆಲವೊಂದು ಹೊಲಗಳಿಗೆ ರಸ್ತೆಯೆ ಇಲ್ಲ. ಹಾಗಾಗಿ, ಬೇರೆ ರೈತರ ಹೊಲದಲ್ಲಿ ಹಾಯ್ದು ಹೋಗಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಬೆಳೆ ಹಾನಿ ಉಂಟಾಗುತ್ತದೆ ಎಂಬ ಕಾರಣದಿಂದ ಗಲಾಟೆ, ಘರ್ಷಣೆಗಳಾಗಿದ್ದು ಹೊಸತೇನಲ್ಲ.
ಈ ಬಗ್ಗೆ ಗ್ರಾಮದ ಜನತೆ ಗ್ರಾಮ ಪಂಚಾಯ್ತಿ ಹಾಗೂ ಅನೇಕ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಕೆಲ ರೈತರು ತಮ್ಮ ತಮ್ಮ ಹೊಲಗಳಿಗೆ ಹೋಗುವ ದಾರಿಗಳನ್ನು ತಾವೇ ಸುಧಾರಣೆ ಮಾಡಿಕೊಂಡಿದ್ದಾರೆ. ಅಲ್ಲದೇ, ಕಪ್ಪು ಮಣ್ಣಿರುವ ಧಾರವಾಡ ಪೂರ್ವ ಭಾಗ, ಕುಂದಗೋಳ, ನವಲಗುಂದ ತಾಲೂಕುಗಳಲ್ಲಿ ಹೊಲಗಳ ರಸ್ತೆಯ ಕಿರಿಕಿರಿ ಬಹಳ.
- ಕಲ್ಮೇಶ ಪಟ್ಟಣದವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement