ನಿರಂತರ ಸಾಹಿತ್ಯಿಕ ಕಾರ್ಯಕ್ರಮ: ಅಂಗಡಿ ಶ್ಲಾಘನೆ
ಕುಂದಗೋಳ: ತಾಲೂಕಿನಲ್ಲಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಸಾಹಿತಿಗಳಾದ ಜಿ.ಡಿ. ಘೋರ್ಪಡೆ, ಎಸ್.ಸಿ. ಶ್ಯಾನವಾಡ ಸೇರಿ ತಾಲೂಕಿನ ಪ್ರತಿ ಸಾಹಿತ್ಯಾಸಕ್ತರಿಂದ ಚಿಂತನಗೋಷ್ಠಿಗಳು ನಿರಂತರ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ ಲಿಂಗರಾಜ ಅಂಗಡಿ ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ಬಸವಣ್ಣಜ್ಜನವರ ಕಲ್ಯಾಣಪುರದ ಕಲ್ಯಾಣ ಮಂಟಪದಲ್ಲಿ ತಾಸಾಪ, ಚುಸಾಪ, ಕಸಾಪ, ಜಾಪ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶ್ಯಾನವಾಡ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದರ ಸಂಘದಾಧ್ಯಕ್ಷ ಮಲ್ಲೇಶ ಮಾಳವಾಡ ಆಶಯ ನುಡಿ ವ್ಯಕ್ತಪಡಿಸಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಡಿ. ಘೋರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎಚ್.ಎಲ್. ನದಾಫ್ ಅತಿಥಿ ನುಡಿಯನ್ನಾಡಿದರು. ಸಾನಿಧ್ಯ ವಹಿಸಿದ್ದ ತ್ರಿವಿಧ ದಾಸೋಹ ಮೂರ್ತಿ ಬಸಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಂಶಿ ಕೆಎಲ್ಇ ಅಧ್ಯಕ್ಷ ಎ.ಬಿ. ಉಪ್ಪಿನ, ತಾಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಜಾನಪದ ಪರಿಷತ್ ಅಧ್ಯಕ್ಷ ವೀರೇಶ ಬಡಿಗೇರ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾಂತಾ ಹೂಗಾರ ಸೇರಿ ಒಟ್ಟು 48 ಜನ ಕವಿಗಳು ಭಾಗವಹಿಸಿದ್ದರು. ಚುಸಾಪ ಪ್ರಧಾನ ಕಾರ್ಯದರ್ಶಿ ಸಂತೋಷ ಬಡಿಗೇರ ಸ್ವಾಗತಿಸಿದರು, ಆರ್.ಬಿ. ಸರಾವರಿ ನಿರೂಪಿಸಿದರು.