ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 31
ಯಾವುದೇ ವ್ಯಕ್ತಿಯ ಯಶಸ್ಸಿನ ಹಿಂದೆ ಕಷ್ಟಕರ ಮಾರ್ಗ ಇರುತ್ತದೆ. ಈ ಮಾರ್ಗ ಸವೆಸಬೇಕಾದರೆ ಆರೋಗ್ಯ ಮುಖ್ಯವಾದದ್ದು. ಆದಕಾರಣ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಧಾರವಾಡ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವೀರಭದ್ರ ಹಂಚಿನಾಳ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳ 2013-14ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಕಷ್ಟ ಸ್ವೀಕರಿಸಿ, ಸತತ ಅಧ್ಯಯನ, ಪ್ರಾಮಾಣಿಕತೆ, ಶ್ರದ್ಧೆ ರೂಢಿಸಿಕೊಳ್ಳಬೇಕು. ಇದರೊಂದಿಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಂ.ಎಸ್. ಬೆಂಬಳಗಿ ಮಾತನಾಡಿ, ಸಾಧ್ಯ-ಅಸಾಧ್ಯಗಳ ಮಧ್ಯೆ ನೆಮ್ಮದಿಯ ಜೀವನ ನಡೆಸಬೇಕಾದರೆ ದೇಹ ಸುಸ್ಥಿತಿಯಲ್ಲಿರಬೇಕಾದುದು ಅಗತ್ಯವಿದೆ ಎಂದು ಹೇಳಿದರು.
ಪದವಿ ಪ್ರಾಚಾರ್ಯ ಡಾ. ಆನಂದ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಪ್ರೊ. ವಿ.ವಿ. ಪಾಟೀಲ, ಪ್ರೊ. ಬಿ.ಎಸ್. ಪಾಟೀಲ ಮತ್ತಿತರರು ಹಾಜರಿದ್ದರು.
ಪದವಿಪೂರ್ವ ಪ್ರಾಚಾರ್ಯ ಎಸ್.ಎ. ಗಣಿ ಸ್ವಾಗತಿಸಿದರು. ಪ್ರೊ. ಎಂ.ಆರ್. ಶೆಟ್ಟರ್ ಹಾಗೂ ಪ್ರೊ. ಪ್ರೀತಿ ಎಂ. ನಿರೂಪಿಸಿದರು. ಪ್ರೊ. ಎ.ಜಿ. ದೇಸಾಯಿ ವಂದಿಸಿದರು.