ಮೈದಾನಕ್ಕೆ ಮತ್ತೆ ಬೀಗ: ಆಕ್ರೋಶ
ಹುಬ್ಬಳ್ಳಿ: ಜಿಮಖಾನ ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ ಎಂದು ಹೋರಾಟ ಮಾಡುತ್ತಿರುವ ಗ್ರೌಂಡ್ ಬಚಾವೋ ಸಮಿತಿ ಕಾರ್ಯಕರ್ತರು ಶನಿವಾರ ಮೈದಾನಕ್ಕೆ ಹಾಕಿದ್ದ ಬೀಗ ಒಡೆದು ಒಳಗೆ ಪ್ರವೇಶಿಸಿದರು.
ಶುಕ್ರವಾರ ಮೈದಾನದ ಗೇಟ್‌ಗಳಿಗೆ ಬೀಗ ಹಾಕುವುದಿಲ್ಲ, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಹೇಳಿದ್ದರೂ ಶನಿವಾರ ಬೆಳಗ್ಗೆ ಪ್ರತಿಭಟನಾಕಾರರು ಮೈದಾನದ ಬಳಿ ಸಂದರ್ಭ ಮೈದಾನದ ಮುಖ್ಯದ್ವಾರಕ್ಕೆ ಬೀಗ ಜಡಿಯಲಾಗಿತ್ತು.
ಗೇಟ್‌ಗೆ ಹಾಕಿರುವ ಬೀಗ ನೋಡಿದ ನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ರಿಕ್ರಿಯೇಷನ್ ಕ್ಲಬ್ ಪದಾಧಿಕಾರಿಗಳು ಸೇರಿದಂತೆ ಇನ್ನಿತರರ ವಿರುದ್ಧ ಘೋಷಣೆ ಕೂಗಿ ಮೈದಾನ ಪ್ರವೇಶಕ್ಕೆ ಅನುಕೂಲ ಮಾಡಿಕೊಡಿ ಎಂದು ಸ್ಥಳದಲ್ಲಿದ್ದ ಕ್ಲಬ್ ಮ್ಯಾನೇಜರ್ ಚವಟಿ ಅವರಿಗೆ ವಿನಂತಿಸಿಕೊಂಡಿದ್ದಾರೆ. ನಂತರ ಎಸಿಪಿ ಬಡಿಗೇರ ಅವರೂ ಕೂಡ ಚವಟಿ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿ ಸಾರ್ವಜನಿಕರಿಗೆ ಮೈದಾನ ಪ್ರವೇಶಕ್ಕೆ ಅನುಕೂಲ ಕಲ್ಪಿಸಿ ಎಂದು ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಗೇಟ್‌ಗೆ ಹಾಕಿದ್ದ ಬೀಗ ಮುರಿದು ಒಳಗೆ ಪ್ರವೇಶಿಸಿ ಕೆಲ ಕಾಲ ಕ್ರಿಕೆಟ್ ಆಡಿದ್ದಾರೆ.
ಪ್ರತಿಭಟನೆಯಲ್ಲಿ ಸಿಬಿಎಲ್ ಹೆಗ್ಡೆ, ವೆಂಕಟೇಶ ಸವದತ್ತಿ, ಕಾಡಯ್ಯ ಹಿರೇಮಠ, ಮನೋಜ ಹಾನಗಲ್, ಹೂವಪ್ಪ ದಾಯಗೊಂಡಿ, ಶರದ್ ಭಗತ್, ಡಾ. ಮಹೇಶ ನಾಲವಾಡ, ಅಮೃತ ಇಜಾರಿ, ಹನುಮಂತಪ್ಪ ಮೇಟಿ, ಶೈಲೇಂದ್ರಕುಮಾರ್ ಪಾಟೀಲ ಇತರರು ಪಾಲ್ಗೊಂಡಿದ್ದರು.