ಸ್ಲಂ ನಿವಾಸಿಗಳಿಗೆ ಸ್ವಂತ ಮನೆ
ಧಾರವಾಡ: ನಗರದ ಸ್ಲಂ ಹಾಗೂ ಗುಡಿಸಲು ನಿವಾಸಿಗಳಿಗೆ ಸ್ವಂತ ಮನೆ ನಿರ್ಮಿಸಿಕೊಡಲು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತದೆ. ತಮ್ಮ ಅಧಿಕಾರವಧಿಯಲ್ಲೇ ಮನೆ ನಿರ್ಮಿಸಿಕೊಡಲಾಗುವುದು ಎಂದು ಶಾಸಕ ವಿನಯ ಕುಲಕರ್ಣಿ ಭರವಸೆ ನೀಡಿದರು.
ಇಲ್ಲಿನ ಹಾವೇರಪೇಟ್, ಗೊಲ್ಲರ ಕಾಲನಿ ಹಾಗೂ ಹೊಸಯಲ್ಲಾಪುರದಲ್ಲಿರುವ ಚುರುಮುರಿ ಭಟ್ಟಿ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸ್ಲಂ ನಿವಾಸಿಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಮಳೆಗಾಲದಲ್ಲಿ ಮಳೆಯ ನೀರು ಮನೆ ಒಳಗೆಯೇ ಬರುತ್ತಿರುತ್ತದೆ. ಈ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಲಂ ನಿವಾಸಿಗಳಿಗೆ ಸ್ವಂತ ಮನೆ ಕಟ್ಟಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಇಲ್ಲಿಯ ಹಾವೇರಿಪೇಟ್‌ದ ಜನರು ಎಪಿಎಂಸಿ ಜಾಗದಲ್ಲಿ ವಾಸಿಸುತ್ತಿದ್ದಾರೆ. ಅದೇ ರೀತಿ ಗೊಲ್ಲರ ಕಾಲನಿಯ ಜನರು ಕೆಎಸ್‌ಆರ್‌ಟಿಸಿ ಜಾಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಎರಡು ಪ್ರದೇಶಗಳು ಕೊಳಚೆ ಪ್ರದೇಶವಾಗಿದ್ದರಿಂದ ನಿತ್ಯ ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.
ಅಲ್ಲದೇ, ಇದೇ ಜಾಗದಲ್ಲಿ ಚುರುಮುರಿ ಬಟ್ಟಿ ಹಾಕಿಕೊಂಡಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಾಯ ಕಲ್ಪಿಸಲು ಪಾಲಿಕೆ ಸದಸ್ಯರು ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಧಿಕಾರಿಗಳ ಸಭೆ: ಸದ್ಯ ಸ್ಲಂ ಬೋರ್ಡ್‌ನಿಂದ ಒಂದು ಮನೆ ನಿರ್ಮಿಸಲು ರು. 4.5 ಲಕ್ಷ ಬೇಕಾಗುತ್ತದೆ. ಸೆ. 3ರಂದು ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಮನೆ ನಿರ್ಮಾಣ ಹಾಗೂ ಜಾಗ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅನಂತರ ಮುಖ್ಯಮಂತ್ರಿಯವರೊಂದಿಗೆ ಮಾತನಾಡಲಾಗುವುದು. ಅಲ್ಲದೇ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಶೀಘ್ರದಲ್ಲಿಯೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಸಮೀರ ಶುಕ್ಲ, ಪಾಲಿಕೆ ಸದಸ್ಯರಾದ ಯಾಸೀನ ಹಾವೇರಿಪೇಟ್, ದೀಪಕ ಚಿಂಚೋರೆ, ಪ್ರಶಾಂತ ಕೆಕರೆ, ಶಿವು ಚನ್ನಗೌಡರ, ಆನಂದ ಕೇಶಗೊಂಡ, ಶ್ರೀಕಾಂತ ಗೊಲ್ಲರ, ಆನಂದ ಸಿಂಗನಾಥ, ಮುಕ್ತಿಯಾರ ಪಠಾಣ, ಸಂಜಯ ಚುರಮರಿ, ಸಂಜಯ ತುರಮರಿ ಮತ್ತಿತರು ಇದ್ದರು.