ಹುಬ್ಬಳ್ಳಿ ಟೆಕ್ಕಿ, ಹೈದ್ರಾಬಾದ್ನಲ್ಲಿ ಆತ್ಮಹತ್ಯೆ: ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 1
ಹುಬ್ಬಳ್ಳಿ ಮೂಲದ ದೀಪಕ್ ಫಕ್ರಸಾ ಹಬೀಬ್ ಎಂಬ ಟೆಕ್ಕಿ ಭಾನುವಾರ ಬೆಳಗ್ಗೆ ಹೈದ್ರಾಬಾದ್ ನಗರದಲ್ಲಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ಫೋಸಿಸ್ನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ದೀಪಕ್ ಅವರನ್ನು ಕಳೆದ ಅಕ್ಟೋಬರ್ 18ರಂದು ಇನ್ಫೋಸಿಸ್ ಸಾಫ್ಟ್ವೇರ್ ಕಂಪನಿಯನ್ನು ಸೇರಿಕೊಂಡಿದ್ದರು. ಹೈದ್ರಾಬಾದ್ ನಗರದ ಅಣ್ಣಾಜಿಗುಡ ಪ್ರದೇಶದಲ್ಲಿ ಸಿಂಗಪೂರ್ ಟೌನ್ಶಿಪ್ನಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದನು.
ಭಾನುವಾರ ಬೆಳಗ್ಗೆ 5:30ರ ಸುಮಾರಿಗೆ ಮುಂಗೈ ನರವನ್ನು ನೇಲ್ ಕಟ್ಟರ್ನಿಂದ ಕತ್ತರಿಸಿಕೊಂಡು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಘಾಟಕೇಸರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಲಾರ್ಸನ್ ಟುಬ್ರೊ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ದೀಪಕ್, ಕೆಲವು ದಿನಗಳ ಹಿಂದೆಯಷ್ಟೆ ಇನ್ಫೋಸಿಸ್ನ್ನು ಹೆಚ್ಚಿನ ವೇತನ ದೊರೆಯುತ್ತದೆ ಎನ್ನುವ ಕಾರಣಕ್ಕೆ ಸೇರಿದ್ದನು.
ಹುಬ್ಬಳ್ಳಿ ನಗರದ ಅರಳಿಕಟ್ಟಿ ಓಣಿಯ ಮಹಾವೀರ ಗಲ್ಲಿಯಲ್ಲಿ ದೀಪಕ್ ಹಬೀಬ್ ಅವರ ಮನೆ ಇದ್ದು, ಮೃತ ದೀಪಕ್ ಪತ್ನಿ ಆರು ತಿಂಗಳ ತುಂಬು ಗರ್ಭಿಣಿ, ಅಲ್ಲದೇ ದೀಪಕ್ನಿಗೆ ಒಟ್ಟು ಐವರು ಸಹೋದರರಿದ್ದಾರೆ.
ಇನ್ನುಳಿದ ನಾಲ್ವರು ಸಹೋದರರು ಚಿನ್ನಾಭರಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ದೀಪಕ್ ಅವರ ಕಿರಿಯ ಸಹೋದರ ಪ್ರವೀಣ ಹಬೀಬ್, ಕನ್ನಡಪ್ರಭದೊಂದಿಗೆ ಮಾತನಾಡಿ, ನಿನ್ನೆ ರಾತ್ರಿ ದೀಪಕ್ ನಮ್ಮೊಂದಿಗೆ ಚೆನ್ನಾಗಿಯೇ ಮಾತನಾಡಿದ್ದು ಅಲ್ಲದೇ ಹೊಸ ವರ್ಷಾಚರಣೆಗೆ ಹುಬ್ಬಳ್ಳಿಗೆ ಬರುವ ಭರವಸೆ ಕೂಡ ನೀಡಿದ್ದ.
ಭಾನುವಾರ ಆಂಧ್ರ ಪೊಲೀಸ್ರಿಂದ ಫೋನ್ ಕರೆ ಮಾಡಿದ ಮೇಲೆ ದೀಪಕ್ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ತಿಳಿದಿದೆ. ಆದರೆ ನಮಗೆ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದರಲ್ಲಿ ಏನೋ ಹುನ್ನಾರ ಅಡಗಿದೆ ಎಂದು ಮಾಹಿತಿ ನೀಡಿದ್ದಾರೆ.