ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮತಬೇಟೆ ಮುನ್ನ ಹೆಸರು ನೋಂದಣಿ!

Vishwanath S
Updated On : 3 Dec 2013, 11:12 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 2
ಮತಬೇಟೆಗೆ ಮೊದಲು 'ಮತ'ದಾರರ ಹೆಸರು ಪಟ್ಟಿಯಲ್ಲಿ...
ಇನ್ನೂ ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಮಹಾಸಮರದಲ್ಲಿ ಶ್ರೀಸಾಮಾನ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ಆಯಾ ಪಕ್ಷಗಳ ಅಭಿಮಾನಿಗಳು ಭರ್ಜರಿ ತಯಾರಿ ನಡೆಸಿದ್ದಾರೆ!
ಮತದಾರ ಪಟ್ಟಿಯಿಂದ ಹೆಸರು ರದ್ದಾಗಿರುವವರು, ಹೊಸದಾಗಿ ಮತದಾರ ಪಟ್ಟಿ ಯಲ್ಲಿ ಸೇರ್ಪಡೆಯಾಗಬೇಕಾದವರನ್ನು ಪತ್ತೆ ಹಚ್ಚಿ ಅವರುಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕಾರ್ಯ ರಾಜ್ಯಾದ್ಯಂತ ಭರದಿಂದ ಸಾಗಿದ್ದು, ಅವಿಭಜಿತ ಧಾರವಾಡ ಜಿಲ್ಲೆ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ.
ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಸಾಗಿದ್ದರಿಂದ ಚುನಾವಣಾ ಆಯೋಗವು ಹೆಸರು ಸೇರ್ಪಡೆಗೆ ನಿಗದಿಪಡಿಸಿದ್ದ ನ. 30 ದಿನಾಂಕವನ್ನು ಡಿ. 6ರ ವರೆಗೆ ವಿಸ್ತರಿಸಿದೆ.
ಸ್ವಯಂ ಪ್ರೇರಿತರಾಗಿ: ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮಾತ್ರವಲ್ಲದೆ ಆಯಾ ಪಕ್ಷ ಹಾಗೂ ನಾಯಕರುಗಳ ಮೇಲೆ ಅಭಿಮಾನ ಹೊಂದಿರುವ ಶ್ರೀಸಾಮಾನ್ಯರು ಸ್ವಯಂಪ್ರೇರಿತರಾಗಿ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸುವ ಕಾರ್ಯಕ್ಕೆ ಮುಂದಾಗಿದ್ದು, ಚುನಾವಣಾ ವಿಭಾಗದ ಕೆಲಸದ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದು ಸುಳ್ಳಲ್ಲ.
ರಾಜಕೀಯ ಪಕ್ಷಗಳು ಹಾಗೂ ಮತದಾನ ಎಂದರೆ ಮೂಗು ಮುರಿಯುತ್ತಿದ್ದ ಸುಶಿಕ್ಷಿತ ಜನರನ್ನು ಮತ್ತೆ ಚುನಾವಣೆಯಲ್ಲಿ ಮತದಾನ ಮಾಡಲು ಪ್ರೇರೇಪಿಸುವ ಕೆಲಸವೂ ಇದಕ್ಕೆ ಪೂರಕವಾಗಿ ನಡೆಯುತ್ತಿರುವುದು ಉತ್ತಮ ಕೆಲಸವೇ ಆಗಿದೆ.
ಮತದಾರ ಪಟ್ಟಿಯಿಂದ ತಮ್ಮ ಹೆಸರು ರದ್ದುಗೊಂಡಿದ್ದರೂ ಅದನ್ನು ಪುನಃ ಸೇರ್ಪಡೆಗೆ ಪ್ರಯತ್ನಿಸದೇ ಪ್ರತಿಬಾರಿ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗುತ್ತಿದ್ದ ಸಾರ್ವಜನಿಕರನ್ನು ಮತ್ತೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ವಿವಿಧ ಪಕ್ಷಗಳ ಕಾರ್ಯಕರ್ತರು, ಸಂಘಟನೆಗಳು, ಮತದಾನದ ಬಗ್ಗೆ ತಿಳಿದುಕೊಂಡಿರುವ ಪ್ರಜ್ಞಾವಂತರು ಪ್ರಯತ್ನಿಸುತ್ತಿರುವುದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.
ಬಿಜೆಪಿ ಮುಂದೆ....: ಪ್ರಸಕ್ತ ಲೋಕಸಭೆ ಮಹಾಸಮರದಲ್ಲಿ ಯುವ ಸಮುದಾಯವನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ರಾಜಕೀಯ ಪಕ್ಷಗಳು ಸಾಕಷ್ಟು ಪ್ರಯತ್ನಿಸುತ್ತಿವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಚಾರ ಕಾರ್ಯ ನಡೆಸುತ್ತಿರುವ ಸ್ಥಳಗಳಲ್ಲಿ ಯುವ ಸಮುದಾಯವನ್ನು ಹುರುದುಂಬಿಸಲು ಪ್ರಯತ್ನಿಸುತ್ತಿರುವುದು ಈ ಮಾತಿಗೆ ಸಾಕ್ಷಿಯಾಗಿದೆ.
ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕಮಲ ಪಕ್ಷದ ಅಂಗಗಳಾಗಿರುವ ವಿವಿಧ ಸಂಘಟನೆಗಳು ಯುವಕರ ಹೆಸರುಗಳನ್ನು ಹೆಚ್ಚೆಚ್ಚು ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿರುವವರು ಹಾಗೂ ಹೊಸ ಮತದಾರರನ್ನು ಮತದಾರ ಪಟ್ಟಿಯಲ್ಲಿ ಸೇರಿಸಲು ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅಷ್ಟೊಂದು ಕಂಡು ಬರುತ್ತಿಲ್ಲ.
ಟೆಂಟ್ ಮೂಲಕ ಜಾಗೃತಿ!: ಪ್ರತಿನಿತ್ಯ ಒಂದೊಂದು ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಶ್ರೀಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಅಲ್ಲದೇ, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೈಂಕರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಹೊಸದಾಗಿ ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಬೇಕಾಗುವ ಅವಶ್ಯಕ ದಾಖಲಾತಿಗಳನ್ನು ಜನರಿಗೆ ಒದಗಿಸಲು ಈ ತಂಡ ಮುಂದಾಗಿದ್ದರಿಂದ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವವರಲ್ಲಿ ತಲೆ ಬಿಸಿ ಕಡಿಮೆ ಮಾಡಿದೆ.
ದಾಖಲಾತಿಗಳ ಝರಾಕ್ಸ್ ಪ್ರತಿಗಳನ್ನು ನೀಡಲು ಸಾಧ್ಯವಾಗದೆ ಇರುವ ಕಡು ಬಡವರಿಗೆ ಕಾರ್ಯಕರ್ತರು ಹಾಗೂ ಸ್ವಯಂಪ್ರೇರಣೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರು ಕೈಯಾರೆ ಹಣ ನೀಡಿ ಸಹಕರಿಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ, ಸಂಘಟನೆಗಳ ಹಾಗೂ ಸ್ವಯಂಪ್ರೇರಿತ ವ್ಯಕ್ತಿಗಳ ಒಟ್ಟಾರೆ ಶ್ರಮದಿಂದಾಗಿ ಮತದಾರನ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆಂಬ ಸಾರ್ವಜನಿಕರ ಉದ್ದೇಶ ಯಾವುದೇ ರೀತಿಯ ಅಡಚಣೆಯಿಲ್ಲದೆ ಸಾಕಾರಗೊಳ್ಳುತ್ತ ಸಾಗಿದ್ದು, ಜನತೆಗೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬ ಉಮೇದು ಹೆಚ್ಚುವಂತೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರದ 4 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 50 ಸಾವಿರ ಹೊಸ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಗುರಿ ಹೊಂದಿದೆ. ಸೋಮವಾರದವರೆಗೆ 20 ಸಾವಿರ ಮತದಾರರಿಂದ ಅರ್ಜಿ ಪಡೆಯಲಾಗಿದ್ದು, ಡಿ. 6ರ ವರೆಗೂ ಈ ಕಾರ್ಯಕ್ರಮ ಮುಂದುವರೆಯಲಿದೆ.
- ಲಿಂಗರಾಜ ಪಾಟೀಲ
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 3 ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪೈಕಿ ಹು-ಧಾ ಪೂರ್ವ ಕ್ಷೇತ್ರದಲ್ಲಿ 2046, ಪಶ್ಚಿಮ ಕ್ಷೇತ್ರದಲ್ಲಿ 1307 ಹಾಗೂ ಸೆಂಟ್ರಲ್ ಕ್ಷೇತ್ರದಲ್ಲಿ 2363 ಅರ್ಜಿಗಳು ಸಲ್ಲಿಕೆಯಾಗಿವೆ.
- ಎಸ್.ಎಚ್. ನೆರೇಗಲ್,
ಸಾರ್ವಜನಿಕ ಸಂಪರ್ಕಾಧಿಕಾರಿ, ಹು-ಧಾ ಮಹಾನಗರ ಪಾಲಿಕೆ




-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement