ರಾಷ್ಟ್ರದ ಅಭಿವೃದ್ಧಿಗೆ ಮತ ಚಲಾಯಿಸಿ
ಧಾರವಾಡ: ರಾಷ್ಟ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ತೇಜಸ್ವಿನಗರದಲ್ಲಿ ಸೋಮವಾರ ಜರುಗಿದ ವಾರ್ಡ್ ನಂ. 18ರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಡ ಹಾಗೂ ಸಾಮಾನ್ಯ ಜನರಿಗೆ ಅಲ್ಪ ಆಮಿಷಗಳನ್ನು ಒಡ್ಡುವ ಮೂಲಕ ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ರಾಜಕಾರಣ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಮೈಸೂರಿಗೆ ಮಾತ್ರ ಸರ್ಕಾರದ ಅನುದಾನ ನೀಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಆದಕಾರಣ ರಾಜ್ಯದ ಜನತೆ ಪತ್ರ ಚಳವಳಿಯ ಮಾಡುವ ಮೂಲಕ ಏಕರೂಪದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತರುವಂತೆ ತಿಳಿಸಿದರು.
ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಈ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ನಿರಂತರ ನೀರು ಸರಬರಾಜು ಮಾಡುವಂತಹ ಮಹತ್ತರ ಯೋಜನೆಗೆ ರು. 250 ಕೋಟಿ ವೆಚ್ಚದ ಕಾಮಗಾರಿ ಜಾರಿಗೆ ತಂದಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನಗರದ ಅಭಿವೃದ್ಧಿಗಾಗಿ ಅದರಲ್ಲಿಯೂ ತಮ್ಮ ಕ್ಷೇತ್ರದ ಹೆಚ್ಚಿನ ಕೊಳಚೆ ಪ್ರದೇಶಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು.
ಮಾಜಿ ಮೇಯರ್ ಪೂರ್ಣಾ ಪಾಟೀಲ, ಪ್ರಕಾಶ ಗೋಡಬೋಲೆ, ವಿಜಯಾನಂದ ಶೆಟ್ಟಿ, ಮೋಹನ ರಾಮದುರ್ಗ, ಗೌಡಪ್ಪ ಪಾಟೀಲ, ಗೀತಾ ಪಾಟೀಲ, ಶೋಭಾ ಸವಡಿ, ಅನುಸೂಯಾ ಹಿರೇಮಠ, ಅಶ್ವೀನಿ ವೀರಾಪೂರ, ಆನಂದ ಎರಿ, ವಿರೂಪಾಕ್ಷಪ್ಪ ಮರಗಾಲ, ಭೀಮಪ್ಪ ತಳವಾರ, ಹನುಮಂತಪ್ಪ ದಾಸರ, ಈಶ್ವರಯ್ಯ ಹಿರೇಮಠ, ಬಸವರಾಜ ಕಮತರ, ಈರಣ್ಣ ಬಡಿಗೇರ, ಸುರೇಖಾ ಹುಟಗಿಕರ, ಸುನೀಲ ಸೊಂಡೂರ, ಸಂತೋಷ ನಾಗಮ್ಮನವರು, ರುದ್ರೇಶ ಹಿರೇಮಠ ಇದ್ದರು.