ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿದ್ಯಾರ್ಜನೆಗೆ ನೀಲನಕ್ಷೆ ಸಿದ್ಧಪಡಿಸಿ

Vishwanath S
Updated On : 3 Dec 2013, 11:12 am

ಧಾರವಾಡ: ಶಾಲಾ ವಿದ್ಯಾರ್ಥಿಗಳನ್ನು ಎಲ್ಲ ನೆಲೆಗಳಲ್ಲಿ ಅಧ್ಯಯನ ಮಾಡುವ ಮೂಲಕ ಅವರ ವಿದ್ಯಾರ್ಜನೆಗೆ ನೆರವಾಗಬಲ್ಲ  ಸೂಕ್ತ ಬೋಧನಾ ನೀಲನಕ್ಷೆಯೊಂದನ್ನು ಸಹ ಅಧ್ಯಾಪಕರೊಂದಿಗೆ ಸೇರಿ ಶಾಲಾ ಮುಖ್ಯ ಶಿಕ್ಷಕರು ಸಿದ್ಧ ಮಾಡಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಸಲಹೆ ನೀಡಿದರು.
ಇಲ್ಲಿಯ ಡಯಟ್ ಆವರಣದಲ್ಲಿರುವ ರಾಜ್ಯ ಮಟ್ಟದ ತರಬೇತಿ ಕೇಂದ್ರವಾದ 'ರಾಜ್ಯ ಶಾಲಾ ಹೊಣೆಗಾರಿಕೆ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ)' ಬೆಂಗಳೂರು ಹಾಗೂ ಮೈಸೂರು  ವಿಭಾಗದ ಸರ್ಕಾರಿ ಪ್ರೌಢ ಶಾಲೆಗಳ ಪ್ರೊಬೇಷನರಿ ಮುಖ್ಯಾಧ್ಯಾಪಕರಿಗೆ ಹಮ್ಮಿಕೊಂಡಿರುವ 6 ದಿನಗಳ 'ಆಡಳಿತ ನಾಯಕತ್ವ ಹಾಗೂ ಸಾಮಾನ್ಯ ಬುನಾದಿ ತರಬೇತಿ ಶಿಬಿರ'ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕರು ತಮ್ಮ ವ್ಯಕ್ತಿತ್ವದಲ್ಲಿ ಶ್ರೇಷ್ಠ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮುದಾಯದ ಪರಿಸರದಲ್ಲಿ ಉತ್ತಮ ಸಂಬಂಧಗಳನ್ನು ಹೊಂದುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಸ್ಲೆಪ್-ಕರ್ನಾಟಕ ನಿರ್ದೇಶಕ ಆರ್.ಟಿ. ದೇಸಾಯಿ ಮಾತನಾಡಿ, ನಿರೀಕ್ಷಿತ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗದಿರುವುದನ್ನು ನಿರಂತರ ಪರಾಮರ್ಶೆ ಮಾಡಬೇಕಾಗುತ್ತದೆ. ವಿಫಲತೆಯ ಕ್ಷೇತ್ರಗಳನ್ನು ಗುರುತು ಹಾಕಿಕೊಳ್ಳುವ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬ ಮುಖ್ಯಾಧ್ಯಾಪಕರೂ ತಮ್ಮ ಕನಸಿನ ಶಾಲೆಯ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕು ಎಂದು ಹೇಳಿದರು.
ಎಪಿಎಫ್ ಸಮಾಲೋಚಕ ರವೀಂದ್ರ ಪ್ರಕಾಶ್, ಹುಲ್ಯಾಳ, ಎಸ್.ಬಿ. ಬಣಕಾರ, ಶಾರದಾ ಭಟ್ ಮತ್ತಿತರರಿದ್ದರು.
ಸಿಸ್ಲೆಪ್-ಕರ್ನಾಟಕದ ಹಿರಿಯ ಸಹಾಯಕ ನಿರ್ದೇಶಕ ಆರ್.ಎಸ್. ಮುಳ್ಳೂರ ಸ್ವಾಗತಿಸಿದರು. ಪಾರ್ವತಿ ವಸ್ತ್ರದ ನಿರೂಪಿಸಿದರು. ಸಿಸ್ಲೆಪ್ ಸಹಾಯಕ ನಿರ್ದೇಶಕ ಅಶ್ವಿನ್ ವಂದಿಸಿದರು.
ಆರ್‌ಟಿಇ, ಸಿಸಿಇ, ಸಕಾಲ, ಜೀವನ ಕೌಶಲ್ಯಗಳು, ನಾಯಕತ್ವ ತರಬೇತಿ, ಸಮಯ ನಿರ್ವಹಣೆ, ಕರ್ನಾಟಕ ನಾಗರಿಕ ಸೇವಾ ನಿಯಮಗಳು, ಇಲಾಖಾ ಯೋಜನೆಗಳು, ಪತ್ರಾಂಕಿತ ಅಧಿಕಾರಿಗಳ ಕರ್ತವ್ಯಗಳು, ಕರ್ನಾಟಕ ಆರ್ಥಿಕ ಸಂಹಿತೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿಗಳು, ನಿರಂತರ ಮೌಲ್ಯಮಾಪನ ಸೇರಿದಂತೆ ಹಲವಾರು ಮಹತ್ವದ ವಿಷಯಗಳನ್ನು 6 ದಿನಗಳ ಈ ತರಬೇತಿ ಶಿಬಿರ ಒಳಗೊಂಡಿದೆ.
ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ವಿವಿಧ ಜಿಲ್ಲೆಗಳ 56 ಜನ ಪ್ರೊಬೇಷನರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement