ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗ್ರಾಪಂ ಸದಸ್ಯರ ಅಧಿಕಾರಕ್ಕೆ ಕೊಕ್ಕೆ

Lingaraj Badiger
Updated On : 4 Dec 2013, 11:35 am

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 3
ಗ್ರಾಮ ಪಂಚಾಯಿತಿಗಳು ಬಲವಾದರೆ ಗಾಂಧೀಜಿ ಕಂಡ ಗ್ರಾಮ ರಾಜ್ಯದ ಕನಸು ನನಸಾಗುತ್ತದೆ. ಆದರೆ, ಅವರ ಕನಸು ನನಸು ಮಾಡಬೇಕಾದ ಸ್ಥಳೀಯ ಚುನಾಯಿತ ಪ್ರತಿನಿಧಿಗಳೇ ಸದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ.
ಹೌದು, ರಾಜ್ಯದಲ್ಲಿನ 5,627 ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ 91 ಸಾವಿರ ಸದಸ್ಯರು ಎದುರಿಸುತ್ತಿರುವ ಸಮಸ್ಯೆ ಇದು. ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳೇ ಗ್ರಾಮ ಪಂಚಾಯಿತಿಗಳ ಎಲ್ಲ ಆಡಳಿತ ನಿರ್ವಹಿಸುತ್ತಿರುವುದರಿಂದ ಚುನಾಯಿತ ಪ್ರತಿನಿಧಿಗಳು ಕೈ ಕಟ್ಟಿಕೊಂಡು ಕೂರುವಂತಾಗಿದೆ. ಅಲ್ಲದೆ, ಸಮಸ್ಯೆಗೆ ಪರಿಹಾರ ಅರಸಿ ಬಂದ ಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗದೇ ತೊಳಲಾಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಬರುತ್ತಾರೆ. ಅತಿ ಹೆಚ್ಚು ಹತ್ತಿರದಲ್ಲಿರುವ ಚುನಾಯಿತ ಗ್ರಾಪಂ ಸದಸ್ಯರು ಇವರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಾಗುತ್ತದೆ. ಆದರೆ, ಗ್ರಾಪಂ ಸದಸ್ಯರಿಗೆ ಈಗಿರುವ ಅಧಿಕಾರದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ಹಾಗಾಗಿ ಆಯ್ಕೆ ಮಾಡಿದ ಜನರಿಂದಲೇ ದೂಷಣೆಗೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸದ್ಯ ರಾಜ್ಯದ ಸಾಕಷ್ಟು ಗ್ರಾಮ ಪಂಚಾಯಿತಿಗಳು ಹಣಕಾಸಿನ ತೊಂದರೆ ಅನುಭವಿಸುತ್ತಿವೆ. ಕೆಲ ಯೋಜನೆಗಳ ಅನುಸಾರವಾಗಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗದೆ ಗ್ರಾಪಂ ಸದಸ್ಯರು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಒಂದು ವರ್ಷಕ್ಕೆ ಪ್ರತಿ ಗ್ರಾಮ ಪಂಚಾಯಿತಿಗೆ ಕೇವಲ ರು. 8 ಲಕ್ಷ ಅನುದಾನ ನೀಡಿ ಕೈ ತೊಳೆದುಕೊಳ್ಳುತ್ತಿದ್ದು, ಗ್ರಾಪಂ ಸದಸ್ಯರ ಸಮಸ್ಯೆ ಮಾತ್ರ ಅರ್ಥ ಮಾಡಿಕೊಳ್ಳುತ್ತಿಲ್ಲ.
ಸರ್ಕಾರ ನೀಡುವ ಈ ಅನುದಾನದಿಂದ ಆಯಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೇಳಿಕೊಳ್ಳುವಷ್ಟು ಸಮರ್ಪಕ ಕಾರ್ಯಗಳಾಗುತ್ತಿಲ್ಲ. ಇದರಿಂದಾಗಿ ಪ್ರತಿಯೊಂದು ಹಂತದಲ್ಲಿ ಜನರ ದೂಷಣೆಗೆ ಗುರಿಯಾಗುತ್ತಿರುವವರು ಗ್ರಾಪಂ ಸದಸ್ಯರೇ.
ಕೇಂದ್ರ ಸರ್ಕಾರದ ಮೂರನೇ ಹಣಕಾಸು ಆಯೋಗ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಪಂಚಾಯಿತಿಗಳಿಗೆ ಯಾವುದೇ ಶರತ್ತುಗಳನ್ನು ವಿಧಿಸದೆ ನೀಡಬೇಕು. ಅಲ್ಲದೆ, ಸರ್ಕಾರ ಮಂಜೂರು ಮಾಡಿದ ಅನುದಾನ ಪಂಚಾಯಿತಿಗೆ ತಲುಪಲು ತಿಂಗಳುಗಟ್ಟಲೆ ವಿಳಂಬವಾಗುತ್ತದೆ. ಕೆಲ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಸಿ ಎಲ್ಲ ರೀತಿಯ ದಾಖಲಾತಿಗಳನ್ನು ನೀಡಲಾಗುತ್ತದೆ. ಆದರೂ ಕಾಮಗಾರಿ ಹಣ ಪಡೆಯಲು ವರ್ಷಗಟ್ಟಲೇ ಕಾಯಬೇಕಾದ ದುಸ್ಥಿತಿ ಉದ್ಭವಿಸಿದೆ. ಪಂಚಾಯಿತಿಗಳಲ್ಲಿ ಪಿಡಿಒಗಳು ಮೇಲಾದೇಶದಂತೆ ಅಧಿಕಾರ ಮತ್ತು ಆಡಳಿತ ನಿಯಂತ್ರಿಸುತ್ತಿದ್ದಾರೆ. ಹೀಗಾಗಿ, ಗ್ರಾಮಗಳಲ್ಲಿ ಜನರ ಕಷ್ಟ ಕಾರ್ಪಣ್ಯಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ದೂರು ಗ್ರಾಮ ಪಂಚಾಯಿತಿ ಸದಸ್ಯರದ್ದು.
ಇಲಾಖೆ ಸೇರ್ಪಡೆ: 1993ರಲ್ಲಿ ಕೇಂದ್ರ ಸರ್ಕಾರ ನಡೆಸಿದ ರಾಜ್ಯ ಸರ್ಕಾರಗಳ ಗ್ರಾಮೀಣಾಭಿವೃದ್ಧಿ ಸಚಿವರ ದುಂಡು ಮೇಜಿನ ಸಭೆಯಲ್ಲಿನ ಶಿಫಾರಸಿನಂತೆ ಪಶು ಸಂಗೋಪನೆ, ಕೃಷಿ, ವಸತಿ ಮತ್ತು ಆಹಾರ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಾಥಮಿಕ ಶಿಕ್ಷಣ ಸೇರಿದಂತೆ ಒಟ್ಟು 9 ಇಲಾಖೆಗಳನ್ನು ಗ್ರಾಪಂ ಮಟ್ಟದಲ್ಲಿ ತಂದು ಪಂಚಾಯಿತಿಯನ್ನು ಸ್ಥಳೀಯ ಸರ್ಕಾರವನ್ನಾಗಿ ಮಾಡಬೇಕೆಂಬ ಕನಸು ಇನ್ನೂ ಸಾಕಾರಗೊಂಡಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಂಚಾಯಿತಿಯನ್ನು ಬಲಪಡಿಸುವ ಜವಾಬ್ದಾರಿ ಹೊರುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಬಲಪಡಿಸಬೇಕೆಂಬುದು ಗ್ರಾಪಂ ಸದಸ್ಯರ ಆಶಯ.
ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿಗೆ ಸದ್ಯ ನೀಡಲಾಗುತ್ತಿರುವ ಗೌರವ ಧನ ತುಂಬ ಕಡಿಮೆ ಇದೆ. ಹೀಗಿದ್ದರೂ ಗಾಂಧೀಜಿ ಗ್ರಾಮ ರಾಜ್ಯ ಕನಸು ಸಾಕಾರಗೊಳಿಸಲು ದುಡಿಯುತ್ತಿದ್ದಾರೆ. ಅವರಿಗೆ ಗೌರವ ಧನ ಹೆಚ್ಚಿಸುವ ಅವಶ್ಯಕತೆ ಇದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ರು. 5 ಸಾವಿರ, ಉಪಾಧ್ಯಕ್ಷರಿಗೆ ರು. 7 ಸಾವಿರ ಹಾಗೂ ಅಧ್ಯಕ್ಷರಿಗೆ ರು. 10 ಸಾವಿರ ಗೌರವ ಧನ ನೀಡುವ ಮೂಲಕ ಗ್ರಾಪಂ ಸದಸ್ಯರನ್ನು ಪ್ರೋತ್ಸಾಹಿಸಬೇಕೆಂಬುದು ಗ್ರಾಪಂ ಸದಸ್ಯರ ಒಕ್ಕೂಟದ ಒಕ್ಕೊರಲಿನ ಕೂಗು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಕೈ ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರ ಕಲ್ಪಿಸಿಕೊಡಬೇಕು ಎಂದು ರಾಜ್ಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಕ್ಕೂಟ ಆಶಯ ವ್ಯಕ್ತಪಡಿಸಿದೆ.
-ಕಲ್ಮೇಶ ಪಟ್ಟಣದವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement