ವೀರಭದ್ರೇಶ್ವರಸ್ವಾಮಿ ಅದ್ಧೂರಿ ರಥೋತ್ಸವ
ಹುಬ್ಬಳ್ಳಿ: ಹಳೆಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಭದ್ರಕಾಳಿಯ ಅಗ್ನಿ ಮಹೋತ್ಸವ, ರಥೋತ್ಸವ ಹಾಗೂ ಕಾರ್ತಿಕೋತ್ಸವಗಳು ಮಂಗಳವಾರ ವಿಜೃಂಭಣೆಯಿಂದ ಜರುಗಿದವು.
ಬೆಳಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಸೂಡಿ ಜುಕ್ತಿ ಹಿರೇಮಠದ ಶ್ರೀ ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಚಾಲನೆ ನೀಡಿದರು.
ಬಗೇನೂರ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಕರಡಿ ಮಜಲು, ವೀರಪುರವಂತರರು, ಚಿಕ್ಕಮಗಳೂರಿನ ಮಹಿಳಾ ಪುರವಂತರರು, ಎತ್ತಿನ ಜೋಡಿ, ನಂದಿಕೋಲ, ಸಂಬಾಳ ಹಾಗೂ ವಾದ್ಯಮೇಳದೊಂದಿಗೆ ಆರಂಭಗೊಂಡ ಮೆರವಣಿಗೆಯು ಬಮ್ಮಾಪುರ ಓಣಿಯಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಂಜೆ 6ಕ್ಕೆ ವೀರಗಾಸೆ ವೀರಪುರವಂತರಿಂದ ಶಸ್ತ್ರ ಪವಾಡಗಳೊಂದಿಗೆ ಆಗ್ನಿಪ್ರವೇಶ ಕಾರ್ಯಕ್ರಮ ಜರುಗಿತು.
ನಂತರ, ಶ್ರೀ ವೀರಭದ್ರ ಸ್ವಾಮಿಯ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಮುಕ್ತಾಯಗೊಂಡಿತು. ವಿಶ್ವನಾಥ ಸಹೋದರರು ಅನ್ನಸಂಪರ್ತಣೆ ಕಾರ್ಯಕ್ರಮ ನಡೆಸಿಕೊಟ್ಟರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಇಂಡಿ, ಈರಣ್ಣಾ ಬಲೂಚಗಿ, ಎಸ್.ಎಂ. ರುದ್ರಯ್ಯಾ, ಚಂದ್ರಶೇಖರ ಹುರಕಡ್ಲಿ, ಬಸವರಾಜ ಕಲ್ಯಾಣಶೆಟ್ಟರ ಮತ್ತಿತರರು ಪಾಲ್ಗೊಂಡಿದ್ದರು.