ಸರ್ಕಾರ ಸಾಮಾಜಿಕ ಪರಿವರ್ತನೆಯತ್ತ ಗಮನ ಹರಿಸಲಿ
ಅಣ್ಣಿಗೇರಿ: ಸಮಾಜವಾದಿ, ಕಮ್ಯುನಿಸಂ ಸಿದ್ಧಾಂತಗಳ ಪ್ರವಾಹದ ವಿರುದ್ಧ ಈಜಿ ರಾಷ್ಟ್ರೀಯತೆಯ ಪ್ರಜ್ಞೆ ಮೂಡಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ಹೀಗಾಗಿ, ಪ್ರಜ್ಞಾವಂತ ಸಮಾಜ ಜಾಗ್ರತೆ ವಹಿಸುವುದು ಅವಶ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ರವಿರಾಜ ವೆರ್ಣೇಕರ ಹೇಳಿದರು. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿ ಕುರಿತಂತೆ ಪ್ರಕಟಣೆ ನೀಡಿರುವ ಅವರು, ಇಂದು ಸಮಾಜ ಮತೀಯ ಭಾವನೆ, ಜಾತಿ, ಉಪಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಲುಕಿ ನಡುಗುವಂತೆ ಮಾಡಿರುವ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಾಮಾಜಿಕ ಪರಿವರ್ತನೆಯತ್ತ ಗಮನಹರಿಸುವುದು ಅನಿವಾರ್ಯವಾಗಿದೆ ಎಂದರು.
ಜಾತಿ, ಮತ, ಪಂಥ, ವರ್ಗ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯಲ್ಲಿ ಮೇಲು- ಕೀಳು ಎಂಬ ಭಾವ ತೊರೆದು ಸರ್ವರಿಗೂ ಸಮಾನತೆ ತತ್ವ ನೀಡಿ ಯುವ ಜನಾಂಗಕ್ಕೆ ತರಬೇತಿ ಕೊಟ್ಟು ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಬೇಕಿದೆ. ಆಗ, ಮಾತ್ರ ದೇಶದ ಪ್ರಜೆಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ಮಹಿಳೆಗೆ ಆತ್ಮರಕ್ಷಣೆ ಕಲೆ ಅವಶ್ಯ
ಧಾರವಾಡ: ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷನಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿರುವ ಸ್ತ್ರೀ ಇಂದು ತನ್ನ ಆತ್ಮರಕ್ಷಣೆ ಮಾಡಿಕೊಳ್ಳಬೇಕಾಗಿರುವುದು ದುರದೃಷ್ಟಕರ ಎಂದು ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಖೇದ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಜರುಗಿದ ರಾಷ್ಟಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೀರಾಗ್ರಣಿ ಪ್ರಶಸ್ತಿ ಪಡೆದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕರಾಟೆಯಂತಹ ಮಾರ್ಷಲ್ ಕಲೆಗಳನ್ನು ಮಹಿಳೆಯರು ವಿದ್ಯಾರ್ಥಿ ದೆಸೆಯಿಂದಲೆ ಕಲಿತರೆ ಆತ್ಮಸ್ಥೈರ್ಯ, ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಜರುಗಿದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರನ್ನು ಇದೇ ಸಂದರ್ಭದಲ್ಲಿ ಅವರ ಪಾಲಕರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಫೆಲೋಶಿಪ್ ಪ್ರಶಸ್ತಿ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಉಪನ್ಯಾಸಕ ಡಾ. ವಿಶ್ವನಾಥ ಚಿಂತಾಮಣಿ ಅವರಿಗೆ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡುವ 'ಭಗವಾನ ಬುದ್ಧ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ' ಲಭಿಸಿದೆ.
ಡಿ. 12ರಂದು ನವದೆಹಲಿಯಲ್ಲಿ ನಡೆಯುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 29ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ವಿಶ್ವನಾಥ ಚಿಂತಾಮಣಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.