ಗೃಹರಕ್ಷಕರ ಕ್ರೀಡಾಕೂಟ
ಧಾರವಾಡ: ಜಿಲ್ಲಾ ಗೃಹರಕ್ಷಕ ದಳದ ಎರಡು ದಿನಗಳ ಕಾರ್ಯನಿರತ ಗೃಹರಕ್ಷಕರ ಕ್ರೀಡಾಕೂಟ ಡಿ. 7ರಂದು ಬೆಳಗ್ಗೆ 10.30ಕ್ಕೆ ಧಾರವಾಡ ಜಿಲ್ಲಾ ಸಶಸ್ತ್ರ ದಳದ ಪರೇಡ್ ಮೈದಾನದಲ್ಲಿ ಜರುಗಲಿದೆ. ಕ್ರೀಡಾಕೂಟವನ್ನು ಜಿಲ್ಲಾ ಸಶಸ್ತ್ರ ದಳದ ಉಪ ಪೊಲೀಸ್ ಅಧೀಕ್ಷಕ ಎಸ್.ಆರ್. ಬುಯ್ಯಾರ ಉದ್ಘಾಟಿಸಲಿದ್ದು, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಆಯಿಷಾ ಪರ್ವಿನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸತೀಶಕುಮಾರ ಪಾಟೀಲ ಅಧ್ಯಕ್ಷತೆ ವಹಿಸುವರು.
ನಾಳೆ ವಿಚಾರ ಸಂಕಿರಣ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಸಮಗ್ರ ಅಭಿವೃದ್ಧಿ ಸಂಘ ಸೇರಿದಂತೆ ಇನ್ನಿತರ ಜನಪರ ಸಂಘಟನೆಗಳ ಆಶ್ರಯದಲ್ಲಿ ಡಿ. 8ರಂದು ಸಂಜೆ 5ಕ್ಕೆ ಗೋಕುಲ ರಸ್ತೆಯ ವಿಶ್ವಚೇತನ ಆಶ್ರಮದಲ್ಲಿ ಕಸ ವಿಲೇವಾರಿ ಶಾಶ್ವತ ಪರಿಹಾರ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕ ಮುಖಂಡ ಡಾ. ಕೆ.ಎಸ್. ಶರ್ಮಾ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವರು. ಮಹಾದೇವ ಹೊರಟ್ಟಿ, ಬಿ.ವಿ. ಸೋಮಾಪುರ, ಸುರೇಶ ಶೆಜವಾಡಕರ್, ವಿ.ಬಿ. ಪಾಟೀಲ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ದೂರು ನೀಡಿದ ವ್ಯಕ್ತಿ ಮೇಲೆ ಹಲ್ಲೆ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಕ್ಷಣ ಜಾಮೀನು ದೊರೆಯಲಿಲ್ಲ ಎನ್ನುವ ಕಾರಣಕ್ಕೆ ದೂರು ನೀಡಿದ ವ್ಯಕ್ತಿ ಮೇಲೆ 3 ಆರೋಪಿಗಳು ದೈಹಿಕ ಹಲ್ಲೆ ಎಸಗಿದ ಕುರಿತು ಕಸಬಾಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ನೇಕಾರ ನಗರದ ವಿನಾಯಕ ಭಜಂತ್ರಿ, ಇತರ ಮೂವರು ವ್ಯಕ್ತಿಗಳ ಮೇಲೆ ಕೃಷ್ಣಸಿದ್ದಪ್ಪ ಬಿಜಾಪುರ ದೂರು ನೀಡಿದ್ದರು. ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್‌ನ ರಿಕ್ಷಾ ನಿಲ್ದಾಣದ ಬಳಿ ಕೃಷ್ಣ ಅವರು ನಿಂತುಕೊಂಡಿದ್ದ ವೇಳೆ ಆಗಮಿಸಿದ ನಾಲ್ವರು ಆರೋಪಿಗಳು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಸಬಾಪೇಟ್ ಠಾಣೆಯಲ್ಲಿ ದೂರು ದಾಖಲಾಗಿದೆ.