ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಯುವ ಸೇನಾನಿಗಳಿಂದ ದೇಶ ರಕ್ಷಣೆ

Vishwanath S
Updated On : 7 Dec 2013, 11:03 am

ಧಾರವಾಡ: ಭಾರತ ಸೇನಾಪಡೆಗಳಲ್ಲಿನ ಯುವ ಸೇನಾನಿಗಳು ದೇಶ ರಕ್ಷಣೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಅದನ್ನು ಕಾರ್ಗಿಲ್, ನಂತರದ ಘಟನೆಗಳು ಸಾಬೀತುಗೊಳಿಸಿವೆ ಎಂದು ನಿವೃತ್ತ ಕೋಮಡೋರ ಅರವಿಂದ ಶಿಗ್ಗಾಂವ ಹೇಳಿದರು.
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಶುಕ್ರವಾರ ಧಾರವಾಡ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭದಲ್ಲಿ ಧ್ವಜಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಾತು ಮೃದು. ಆದರೆ, ಅಗತ್ಯ ಬಿದ್ದಲ್ಲಿ ದೊಣ್ಣೆ ಬಳಕೆ ಎನ್ನುವುದು ಭಾರತದ ರಕ್ಷಣಾ ಪರಂಪರೆಯ ಬುನಾದಿ ಅಂಶವಾಗಿದೆ. ಇದನ್ನು ಭಾರತೀಯ ಸೈನ್ಯ ಪಡೆಗಳು ಜವಾಬ್ದಾರಿಯುತವಾಗಿ ಪಾಲಿಸಿಕೊಂಡು ಬರುತ್ತಿವೆ ಎಂದ ಶಿಗ್ಗಾಂವ, ಈ ಅಂಶಗಳಿಂದಾಗಿ ದೇಶದ ಜನರಲ್ಲಿ ಸೈನ್ಯದ ಕುರಿತ ವಿಶ್ವಾಸ ವೃದ್ಧಿಸಿದೆ ಎಂದರು.
ನಿವೃತ್ತ ಸೈನಿಕರ ಕಲ್ಯಾಣ ಕಾರ್ಯಕ್ರಮಗಳ ಧ್ವಜ ದಿನಾಚರಣೆಯಂದು ಧ್ವಜಗಳ ಮಾರಾಟ ಮಾಡಲಾಗುತ್ತಿದೆ. ನಿವೃತ್ತ ಸೈನಿಕರು ಹಾಗೂ ಸಂಬಂಧಿಗಳಿಗಿಂತಲೂ ಸಾರ್ವಜನಿಕರು ಹೆಚ್ಚಿನ ಆಸಕ್ತಿ ವಹಿಸಿ ಧ್ವಜ ಖರೀದಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸೈನಿಕ ಕಲ್ಯಾಣ ಇಲಾಖೆ ಧಾರವಾಡ ಕಚೇರಿಯ ಉಪ ನಿರ್ದೇಶಕ ಈಶ್ವರ ಕೊಡೊಳ್ಳಿ, ಮಾಜಿ  ಸೈನಿಕರಿಗೆ ಮಾತ್ರ ಇದ್ದ ಎರಡು ಪಿಂಚಣಿ ಸೌಲಭ್ಯವನ್ನು ಕಳೆದ ಸೆಪ್ಟೆಂಬರ್‌ನಿಂದ ಕುಟುಂಬದ ಅವಲಂಬಿತ ಪತ್ನಿಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾಜಿ ಸೈನಿಕರು ಹಾಗೂ ಅವಲಂಬಿತರು ಕಟ್ಟುವ ಮನೆ ತೆರಿಗೆಯಲ್ಲಿ ಶೇ. 50ರ ರಿಯಾಯ್ತಿ ಜಾರಿಯಾಗಿದೆ. ವಿದ್ಯಾಭ್ಯಾಸಕ್ಕಾಗಿ ಇದ್ದ ಎಲ್ಲ ಶಿಷ್ಯವೇತನಗಳನ್ನು ದ್ವಿಗುಣಗೊಳಿಸಲಾಗಿದೆ ಎಂದು ತಿಳಿಸಿದರು.
 ನಿವೃತ್ತ ಸೇನಾನಿಗಳಾದ ಸರ್‌ದೇಶಪಾಂಡೆ, ಬಿ. ಭಾಗವತ್, ಸೈನಿಕ ಕಲ್ಯಾಣ ಮಂಡಳಿ ಸದಸ್ಯರು, ಮಾಜಿ ಸೈನಿಕರು, ಅವಲಂಬಿತರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಮಿಲಿಟರಿ ಹೆಣ್ಣು ಮಕ್ಕಳ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement