ಅತ್ಯಾಚಾರಕ್ಕೆ ಯತ್ನಿಸಿ ಏಟು ತಿಂದ ಯುವಕ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 8
ಬಾಲಕಿ ಮೇಲೆ ಅತ್ಯಾಚಾರ ಎಸಗಲು ಹೋಗಿದ್ದ ಯುವಕನೊಬ್ಬ ಬಾಲಕಿಯ ಕೈಯಲ್ಲಿ ಕುಡುಗೋಲಿನ ಏಟು ತಿಂದ ಘಟನೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಜರುಗಿದೆ.
ಬೇಗೂರು ಗ್ರಾಮದ ಯುವಕ ಸಿದ್ಧಪ್ಪ ಒಡೆಯರ್ (21) ಎಂಬಾತ ಬಾಲಕಿಯ ಕುಡುಗೋಲಿನ ಏಟಿಗೆ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೇಗೂರು ಗ್ರಾಮದ ಕುಟುಂಬವೊಂದರ 15 ವರ್ಷದ ಬಾಲಕಿ ಮೇಲೆ ಕಣ್ಣು ಹಾಕಿದ್ದಾನೆ. ಪ್ರತಿ ದಿನ ಹೊಲಕ್ಕೆ ಹೋಗುತ್ತಿದ್ದ ವೇಳೆ ಯುವಕ ಬಾಲಕಿಯನ್ನು ಹಿಂಬಾಲಿಸುತ್ತಿದ್ದನು. ಈ ಸಂದರ್ಭದಲ್ಲಿ ಹಲವಾರು ಬಾರಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ್ದಾನೆ. ಆದರೆ ಬಾಲಕಿ, ಯುವಕನ ಮಾತಿಗೆ ಸೊಪ್ಪು ಹಾಕದ್ದರಿಂದ ಕಂಗೆಟ್ಟಿದ್ದ ಯುವಕ ಹೇಗಾದರೂ ಮಾಡಿ ಬಾಲಕಿಯನ್ನು ತನ್ನ ವಶ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದಾನೆ.
ಶುಕ್ರವಾರ ಹೊಲಕ್ಕೆ ಹೋಗುತ್ತಿದ್ದ ವೇಳೆ ಬಾಲಕಿಯನ್ನು ಹಿಂಬಾಲಿಸಿದ ಯುವಕ ಸಂಜೆವರೆಗೆ ಅಲ್ಲಿಯೇ ಕಾಯ್ದು ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿಯ ತಾಯಿ ಮರದ ನೆರಳಿಗೆ ಕಟ್ಟಿದ್ದ ಎತ್ತುಗಳಿಗೆ ಮೇವು ಹಾಕುವಂತೆ ಬಾಲಕಿಗೆ ಹೇಳಿದ್ದಾಳೆ. ಏಕಾಂಗಿಯಾಗಿ ಮೇವು ತೆಗೆದುಕೊಂಡು ಬಂದ ಬಾಲಕಿಯನ್ನು ಇದೇ ಸಂದರ್ಭದಲ್ಲಿ ಬಲಾತ್ಕರಿಸುವುದಕ್ಕೆ ಯತ್ನಿಸಿ ಬಾಲಕಿ ತೋರಿದ ಪ್ರತಿರೋಧ ಮತ್ತು ಕುಡುಗೋಲು ಬೀಸಿದ್ದರಿಂದ ಯುವಕನ ಕೈಗೆ ಬಲವಾದ ಪೆಟ್ಟು ಬಿದ್ದಿದ್ದು, ಪೆಟ್ಟು ತಿಂದ ಯುವಕ ಸಿದ್ಧಪ್ಪ ಬಾಲಕಿಯ ಹೊಲದಿಂದ ಪರಾರಿಯಾಗಿದ್ದಾನೆ. ಘಟನೆ ನಂತರ ಸಿದ್ದಪ್ಪನ ಕುಟುಂಬದವರು ಬಾಲಕಿಯ ಮನೆಯವರೊಂದಿಗೆ ಜಗಳ ತೆಗೆದಿದ್ದಾರೆ. ಗ್ರಾಮದ ಹಿರಿಯರು ಪಂಚಾಯಿತಿ ಮುಖಾಂತರ ವಿವಾದ ಪರಿಹರಿಸಲು ಯತ್ನಿಸಿದರೂ ಸಫಲವಾಗಿಲ್ಲ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ಬಾಲಕಿಯ ಕುಟುಂಬದವರು ಅತ್ಯಾಚಾರ ಯತ್ನ ಎಂದು ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದಪ್ಪ ಒಡೆಯರ್ ಕುಟುಂಬ ಕೂಡ ದೂರು ದಾಖಲಿಸಿದ್ದು, ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಗಿದೆ ಎಂದು ಗರಗ ಠಾಣೆ ಇನ್ಸ್ಪೆಕ್ಟರ್ ವೆಂಕಟಸ್ವಾಮಿ ತಿಳಿಸಿದ್ದಾರೆ.