ಜಿಲ್ಲಾ ಉತ್ಸವ ಅದ್ಧೂರಿ ಆಚರಣೆ
ಕನ್ನಡಪ್ರಭ ವಾರ್ತೆ, ಅಣ್ಣಿಗೇರಿ, ಡಿ. 10
ಪಟ್ಟಣದಲ್ಲಿ ಡಿ. 15ರಂದು ಧಾರವಾಡ ಜಿಲ್ಲಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ತಿಳಿಸಿದರು.
ಸ್ಥಳೀಯ ಪರಿವೀಕ್ಷಣಾ ಮಂದಿರದಲ್ಲಿ ಜರುಗಿದ ಜಿಲ್ಲಾ ಉತ್ಸವ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲಾ ಉತ್ಸವಕ್ಕೆ ವ್ಯವಸ್ಥಿತ ಆಚರಣೆಗೆ ಉತ್ಸವ ಸಮಿತಿ ರಚಿಸಲು ಷಣ್ಮುಖ ಗುರಿಕಾರ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಂಪ ಸ್ಮಾರಕ ಭವನದಲ್ಲಿ ಜಿಲ್ಲಾ ಉತ್ಸವ ಆಚರಣೆ ಮಾಡಬೇಕು.
ಮಾರ್ಕೆಟಿನ ಕಿತ್ತೂರು ಚನ್ನಮ್ಮ ವೃತ್ತದ ಬಯಲಿನಲ್ಲಿ ನಾಟಕ ಪ್ರದರ್ಶನಕ್ಕೆ ಕಮಿಟಿ ನಿರ್ಧಾರ ಕೈಗೊಳ್ಳಬೇಕೆಂದ ಅವರು ಉತ್ಸವ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ಮೇಳಗಳು, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳು, ಸಾಹಿತಿಗಳು ಪಾಲ್ಗೊಳ್ಳುವರು ಎಂದರು.
ಈ ಸಂದರ್ಭ ತಹಸೀಲ್ದಾರ್ ಭಜಂತ್ರಿ, ವಿಶೇಷ ತಹಸೀಲ್ದಾರ್ ನವೀನ ಹುಲ್ಲೂರ, ಧಾರವಾಡ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ, ಪ್ರೊ. ಎಸ್.ಎಸ್. ಹರ್ಲಾಪುರ, ಚಂಬಣ್ಣ ಹುಬ್ಬಳ್ಳಿ, ಆರಕ್ಷಕ ಠಾಣಾಧಿಕಾರಿ ಪ್ರವೀಣ ನೀಲಮ್ಮನವರ, ಬಿಇಒ ಬಿ.ಎಸ್. ಮಾಯಾಚಾರಿ, ಐ.ಎಂ. ಬಣಗಾರ, ಉಮಾಪತಿ, ಅಧಿಕಾರಿಗಳು ಇದ್ದರು. ಪುರಸಭೆ ಸದಸ್ಯರು, ಸಾರ್ವಜನಿಕರು, ಕನ್ನಡಾಭಿಮಾನಿಗಳು ಇದ್ದರು.