ಧಾರವಾಡದಲ್ಲಿ ರಸ್ತೆ ಅಪಘಾತ: ಶಿಕ್ಷಕರಿಬ್ಬರ ಸಾವು
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 10
ಇಲ್ಲಿಗೆ ಸಮೀಪದ ಹಳಿಯಾಳ ರಸ್ತೆಯ ಅಗ್ರೋ ನಗರದ ಬಳಿ ಮಂಗಳವಾರ ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ನಿಗದಿ ಶಾಲೆಯ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ.
ಬಾದಾಮಿ ಮೂಲದ ತಾಲೂಕಿನ ನಿಗದಿಯ ಮಲೆನಾಡು ಶಿಕ್ಷಣ ಸಮಿತಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶಂಕರ ಪೋನಪ್ಪ ಪಮ್ಮಾರ (46) ಮತ್ತು ಮೂಲತಃ ಲಕ್ಷ್ಮೇಶ್ವರದ ಹಾಗೂ ನಿಗದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ರವೀಂದ್ರ ಆರ್. ಪಾಟೀಲ (44) ಮೃತಪಟ್ಟವರು. ಇಲ್ಲಿಯ ಶ್ರೀನಗರದ ಬಳಿ ಮನೆ ಮಾಡಿರುವ ಇಬ್ಬರು ಶಿಕ್ಷಕರು ನಿತ್ಯ ಒಂದೇ ಬೈಕ್ನಲ್ಲಿ ಶಾಲೆಗೆ ಹೋಗುತ್ತಿದ್ದರು. ಅಂತೆಯೇ, ಮಂಗಳವಾರ ಬೈಕ್ ಮೇಲೆ ಹೊರಟಿದ್ದಾಗ ನಗರದ ಹೊರ ವಲಯದ ಅಗ್ರೋನಗರದ ಬಳಿ ಬಸ್ ಹಿಂದಿಕ್ಕಲು ಹೋಗಿ ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿ ದುರ್ಘಟನೆ ನಡೆದಿದೆ. ಶಂಕರ ಪಮ್ಮಾರ ಸ್ಥಳದಲ್ಲಿಯೇ ಮೃತಪಟ್ಟರೆ, ರವೀಂದ್ರ ಪಾಟೀಲ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟರು. ಸುದ್ದಿ ತಿಳಿದ ವಿದ್ಯಾರ್ಥಿಗಳು, ಪಾಲಕರು ಮತ್ತು ಸಾರ್ವಜನಿಕರು ಅಪಘಾತ ಸ್ಥಳದಲ್ಲಿ ರೋದಿಸುತ್ತಿದ್ದ ದೃಶ್ಯ ಕಂಡುಬಂದಿತು. ಘಟನಾ ಸ್ಥಳಕ್ಕೆ ಗ್ರಾಮೀಣ ವೃತ್ತದ ಸಿಪಿಐ ಅಶೋಕ ಡಿ. ಭೇಟಿ ನೀಡಿದ್ದರು. ಪಿಎಸ್ಐ ಶೋಭಾ ಭೋಸ್ಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ನೆಚ್ಚಿನ ಶಿಕ್ಷಕರ ಸಾವಿಗೆ ವಿದ್ಯಾರ್ಥಿಗಳ ಕಂಬನಿ
ಧಾರವಾಡ: ನಮ್ಮೆಲ್ಲರ ಭವಿಷ್ಯ ರೂಪಿಸಬೇಕಿದ್ದ ನಮ್ಮ ಮಾಸ್ತರಿಗೆ ಈ ರೀತಿಯಾಗಬೇಕಿತ್ತೆ... ದೇವರು ಇಷ್ಟೊಂದು ಕ್ರೂರಿಯೇ...
ತಮ್ಮ ಶಾಲಾ ಶಿಕ್ಷಕರಿಬ್ಬರ ಅಸಹಜ ಸಾವಿಗೆ ಮುದ್ದು ಮಕ್ಕಳು ಆಸ್ಪತ್ರೆ ಎದುರು ಕಣ್ಣೀರಿಟ್ಟು ಗೋಳಾಡುತ್ತಿದ್ದ ಕ್ಷಣ ಅಲ್ಲಿ ನೆರೆದಿದ್ದ ಎಲ್ಲರ ಕರುಳು ಕಿವಿಚಿದಂತಾಗಿತ್ತು
ಸಮೀಪದ ಹಳಿಯಾಳ ರಸ್ತೆಯ ಅಗ್ರೋನಗರ ಕ್ರಾಸ್ನಲ್ಲಿ ಮಂಗಳವಾರ ನಡೆದ ಬೈಕ್ ಅಪಘಾತದಲ್ಲಿ ನಿಗದಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ರವೀಂದ್ರ ಆರ್. ಪಾಟೀಲ (45) ಹಾಗೂ ಅದೇ ಗ್ರಾಮದ ಸರ್ಕಾರಿ ಅನುದಾನಿತ ಶಾಲೆಯ ಶಿಕ್ಷಕರಾಗಿದ್ದ ಎಸ್.ಪಿ. ಪಮ್ಮಾರ (46) ಸಾವನ್ನಪ್ಪಿದ್ದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಅವರ ಕಳೇಬರಹ ನೋಡಿ ಮಕ್ಕಳು, ಸಹ ಶಿಕ್ಷಕರು ಮಮ್ಮುಲ ಮರಗಿದರು.
ಈ ಇಬ್ಬರು ಶಿಕ್ಷಕರು ಮೂಲತಃ ಬದಾಮಿ ಹಾಗೂ ಲಕ್ಷ್ಮೇಶ್ವರದವರಾಗಿದ್ದು, ನಿಗದಿ ಶಾಲೆಗೆ ಸಮೀಪವಾಗಲೆಂದು ಇಲ್ಲಿನ ಬಸವನಗರದಲ್ಲಿ ವಾಸವಾಗಿದ್ದರು. ಹಾಗಾಗಿ, ಪ್ರತಿದಿನ ಒಂದೇ ಬೈಕ್ನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು. ಅದರಂತೆ ಮಂಗಳವಾರವೂ ಎಂದಿನಂತೆ ಬೆಳಗ್ಗೆ ಶಾಲೆಗೆ ಹೊರಟಿದ್ದ ಸಂದರ್ಭ ನಡೆದ ದುರ್ಘಟನೆ ವಿದ್ಯಾರ್ಥಿಗಳನ್ನು ದುಃಖದ ಮಡುವಿಗೆ ತಳ್ಳಿತ್ತು.
ಶಾಲಾ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಪಮ್ಮಾರ ಮತ್ತು ಪಾಟೀಲ್ ಮಕ್ಕಳೊಂದಿಗೆ ಮಕ್ಕಳಾಗಿದ್ದರು. ಎಲ್ಲರಿಗೂ ಅಚ್ಚು-ಮೆಚ್ಚಿನ ಶಿಕ್ಷಕರು. ಅಲ್ಲದೆ, ವಿದ್ಯಾರ್ಥಿಗಳನ್ನು ಗೆಳೆಯರಂತೆ ನೋಡಿಕೊಂಡು ಪಠ್ಯಕ್ರಮ ತಿಳಿಸಿಕೊಡುತ್ತಿದ್ದ ಶಿಕ್ಷಕರು ಇನ್ನಿಲ್ಲ ಎಂಬ ಸುದ್ದಿ ಮುದ್ದು ಮಕ್ಕಳ ಮನಸ್ಸನ್ನು ಕಲುಕಿತ್ತು. ಅಪಘಾತದ ವಿಷಯ ತಿಳಿದ ತಕ್ಷಣವೇ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟೊತ್ತಿಗಾಗಲೇ ಪಮ್ಮಾರ ಅವರ ಪ್ರಾಣ ಪಕ್ಷಿ ಹಾರಿತ್ತು. ಪಾಟೀಲ್ ಅವರಿಗೂ ತೀವ್ರ ಗಾಯಗಳು ಉಂಟಾಗಿದ್ದವು. ಹಾಗಾಗಿ, ಶರವೇಗದಲ್ಲಿ ಆಸ್ಪತ್ರೆ ದಾಖಲಿಸಿದ್ದಾರಾದರೂ ಜವರಾಯ ಮಾತ್ರ ಪಾಟೀಲ್ ಅವರ ಕೈ ಬಿಡಲೇ ಇಲ್ಲ.
ಎಸ್.ಪಿ. ಪಮ್ಮಾರ ಅವರು ಮೂಲತಃ ಬದಾಮಿಯ ಬಳಿಯ ಒಂದು ತಾಂಡದವರಾಗಿದ್ದರು. ಅದರಂತೆ ರವೀಂದ್ರ ಪಾಟೀಲ ಅವರು ಲಕ್ಷ್ಮೇಶ್ವರ ಬಳಿಯ ಮಲ್ಲಪುರ ಗ್ರಾಮದವರು. ಈ ಶಿಕ್ಷಕರ ಅಸಹಜ ಸಾವಿಗೆ ನಿಗದಿ ಗ್ರಾಮಸ್ಥರು ಕಂಬನಿ ಮಿಡಿದರು. ಅಲ್ಲದೆ, ಪಾಟೀಲ ಹಾಗೂ ಪಮ್ಮಾರ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಿಕ್ಷಕರ ಈ ಸಾವಿನಿಂದಾಗಿ ಇಡೀ ಜಿಲ್ಲಾಸ್ಪತ್ರೆಯಲ್ಲಿ ನೆರೆದಿದ್ದ ಎಲ್ಲರನ್ನು ದುಃಖದ ಮಡುವಿಗೆ ತಳ್ಳಿತ್ತು. ಇಬ್ಬರು ಶಿಕ್ಷಕರು ಮಕ್ಕಳಿಗೆ ತುಂಬಾ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಇವರ ಬಳಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಉತ್ತಮ ಕೆಲಸದಲ್ಲಿದ್ದಾರೆ. ಅಲ್ಲದೆ, ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಸಹ ಮಾಡುತ್ತಿದ್ದರು ಎನ್ನುತ್ತಾರೆ ಮಲೆನಾಡ ಶಿಕ್ಷಣ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ.