ಮಧ್ಯಂತರ ಆದೇಶ-ತಜ್ಞರೊಂದಿಗೆ ಸಮಾಲೋಚನೆ: ಸಿದ್ದರಾಮಯ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 10
ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹಾದಾಯಿ ನ್ಯಾಯಾಧೀಕರಣದಿಂದ ಕುಡಿಯುವ ನೀರಿಗಾಗಿ ಮಧ್ಯಂತರ ಆದೇಶ ಪಡೆಯುವ ನಿಟ್ಟಿನಲ್ಲಿ ರಾಜ್ಯದ ಕಾನೂನು ತಜ್ಞರ ತಂಡದೊಂದಿಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಮಧ್ಯಂತರ ಆದೇಶ ಪಡೆಯುವಂತೆ ಇಲ್ಲಿನ ಜನತೆ ಒತ್ತಾಯಿಸುತ್ತಿದ್ದಾರೆ ಮತ್ತು ಇದು ಕುಡಿಯುವ ನೀರಿನ ಯೋಜನೆ ಆಗಿರುವ ಹಿನ್ನೆಲೆಯಲ್ಲಿ ಕಾನೂನು ತಜ್ಞರೊಂದಿಗೆ ಅನುಕೂಲ-ಅನಾನುಕೂಲಗಳ ಬಗ್ಗೆ ಸಮಾಲೋಚಿಸಿ ನ್ಯಾಯಾಧೀಕರಣದ ಎದುರು ವಾದ ಮಂಡಿಸಲಾಗುವುದು ಎಂದರು.
ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಕಳೆದ ಒಂದೂವರೆ ವರ್ಷದಿಂದ ಅಧ್ಯಕ್ಷರ ನೇಮಕವಾಗಿಲ್ಲ. ಈ ನಿಟ್ಟಿನಲ್ಲಿ 12ರಂದು ವಿಧಾನಸಭೆ ಸ್ಪೀಕರ್, ವಿರೋಧಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರು ಆಗಬೇಕು ಈ ಹಿನ್ನೆಲೆಯಲ್ಲಿ ನೇಮಕಾತಿಯಲ್ಲಿ ವಿಳಂಬವಾಗಿದೆ ಎಂದರು.
ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ದರದ ವಿರುದ್ಧ ಈಗಾಗಲೇ ಸಕ್ಕರೆ ಕಾರ್ಖಾನೆ ಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಟನ್ ಕಬ್ಬಿಗೆ ಸರ್ಕಾರ ರು. 2650 ನಿಗದಿ ಮಾಡಿದೆ. ಜೊತೆಗೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ರು. 300 ಕೋಟಿ ಪ್ಯಾಕೇಜ್ ಘೋಷಿಸಿದೆ. ಅಲ್ಲದೆ, ತೆರಿಗೆ, ರಸ್ತೆ ಶುಲ್ಕವನ್ನು ಮನ್ನಾ ಮಾಡಿದೆ ಎಂದರು.
ಹೈಕಮಾಂಡ್ ತೀರ್ಮಾನಿಸಲಿ: ಸಂತೋಷ ಲಾಡ್ ರಾಜೀನಾಮೆಯಿಂದ ತೆರವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಬೇರೆಯವರಿಗೆ ವಹಿಸುವ ಕುರಿತು ಹೈಕಮಾಂಡ್ ತೀರ್ಮಾನಿಸಲಿದ್ದು, ಈಗಾಗಲೇ ಈ ವಿಷಯ ಪಕ್ಷದ ಹೈಕಮಾಂಡ್ ಗಮನದಲ್ಲಿದೆ ಎಂದರು.
ಜಿಮಖಾನಾ ಮೈದಾನ ವಿವಾದಕ್ಕೆ ಗಮನಕ್ಕೆ ಬಂದಿದ್ದು, ಇನ್ನೂ ಸರ್ಕಾರದ ಪರಿಶೀಲನೆ ಹಂತದಲ್ಲಿದೆ ಎಂದರು. ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಸದಾನಂದ ಡಂಗನವರ ಸೇರಿದಂತೆ ಇನ್ನಿತರರು ಇದ್ದರು.