ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾಲೆ ಮೇಲೆ ಮೊಬೈಲ್ ಟವರ್

Mainashree
Updated On : 11 Dec 2013, 12:03 pm

ಹುಬ್ಬಳ್ಳಿ: ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದರೂ ಶಾಲೆ ಕಟ್ಟಡದ ಮೇಲೆ ಮೊಬೈಲ್ ಫೋನ್ ಟವರ್ ಅಳವಡಿಸುವ ಮೂಲಕ ಮಕ್ಕಳ ಭವಿಷ್ಯದ ಜತೆಗೆ ಶಿಕ್ಷಣ ಇಲಾಖೆ, ಖಾಸಗಿ ಮೊಬೈಲ್ ಕಂಪನಿ ಚೆಲ್ಲಾಟವಾಡುತ್ತಿದೆ.
ಇಲ್ಲಿನ ಸಾಯಿನಗರದಲ್ಲಿರುವ ಶ್ರೀನಗರ ಸಹಕಾರಿ ಗೃಹ ನಿರ್ಮಾಣ ಸಂಘದ ದಿ. ಶ್ರೀಮತಿ ತುಳಸಾಬಾಯಿ ಅನಿಖಿಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದಿ. ಶ್ರೀಮತಿ ಲೀಲಾಬಾಯಿ ನಾಡಗೀರ ಪ್ರೌಢಶಾಲಾ ಕಟ್ಟಡದ  ಮೇಲೆ ಮೊಬೈಲ್ ಅಳವಡಿಸಲಾಗಿದೆ. ಪ್ರತಿ ತಿಂಗಳು ಸಾವಿರಾರು ರುಪಾಯಿ ಬಾಡಿಗೆ ಎನ್ನುವ ಒಂದೇ ಕಾರಣಕ್ಕೆ ಮಕ್ಕಳ ಭವಿಷ್ಯದೊಂದಿಗೆ ಸರ್ಕಾರ ಕೂಡ ಚೆಲ್ಲಾಟವಾಡುತ್ತಿದೆ.
ಸರ್ಕಾರದ ನಿಯಮಾವಳಿ ಪ್ರಕಾರ ಶಾಲೆ, ಆಸ್ಪತ್ರೆಗಳ ಸುತ್ತ ಮೊಬೈಲ್ ಫೋನ್ ಟವರ್‌ಗಳ ಸ್ಥಾಪನೆ ನಿಷೇಧಿಸಲಾಗಿದ್ದರೂ ಇಲ್ಲಿ ಮಾತ್ರ ಸರ್ಕಾರದ ಆದೇಶ ಪಾಲನೆಯಾಗುವುದು ಹೋಗಲಿ, ಸರ್ಕಾರದ ಭಾಗವೇ ಆಗಿರುವ ಶಿಕ್ಷಣ ಇಲಾಖೆ ಮೊಬೈಲ್ ಟವರ್ ಸ್ಥಾಪಿಸಿದ್ದರೂ ಅದನ್ನು ತೆಗೆಸಿ ಹಾಕುವ ಕುರಿತು ಚಿಂತನೆ ಮಾಡಿಲ್ಲ.
ಸರ್ಕಾರದ ಸ್ವಾಮಿತ್ವದಲ್ಲಿ ಶಾಲೆ ನಡೆಯುತ್ತಿದ್ದರೂ ಕೂಡ ಸುತ್ತಲಿನ ನಾಗರಿಕರಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಲಿ ಇಲ್ಲಿಯವರೆಗೆ ಈ ಕುರಿತು ಚಿಂತನೆ ಮಾಡಿಲ್ಲ. ಸಾಯಿನಗರದ ಈ ಶಾಲೆಯಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇದ್ದು, ಅಂದಾಜು ಏಳುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರೋಟರಿ ಕ್ಲಬ್‌ನ ಸಹಯೋಗದಲ್ಲಿ ಶಾಲೆಯನ್ನು ನಿರ್ಮಿಸಲಾಗಿದ್ದು, ಕೆಲವು ವರ್ಷಗಳ ಹಿಂದೆಯಷ್ಟೆ ಮೊಬೈಲ್ ಟವರ್ ಅಳವಡಿಸಲಾಗಿದೆ.
ಆರನೇ ವಯಸ್ಸಿಗೆ ಮೊದಲನೇ ತರಗತಿ ಪ್ರವೇಶಿಸುವ ಒಂದು ಮಗು ಕನಿಷ್ಠ ತನ್ನ ವಯಸ್ಸು ಹದಿನಾಲ್ಕು ಆಗುವವರೆಗೆ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತದೆ. ರೇಡಿಯಾಲಾಜಿಸ್ಟ್‌ಗಳ ಪ್ರಕಾರ ಸುದೀರ್ಘಾವಧಿವರೆಗೆ ಮೊಬೈಲ್ ಟವರ್‌ಗಳಿಂದ ಹೊರಸೂಸುವ ತರಂಗಾಂತರ ಮತ್ತು ವಿಕಿರಣಗಳಿಗೆ ವ್ಯಕ್ತಿಯೊಬ್ಬ ತೆರೆದುಕೊಳ್ಳುತ್ತಿದ್ದರೆ ಅಂತಹ ವ್ಯಕ್ತಿಯಲ್ಲಿ ದೀರ್ಘಾವಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ ಎನ್ನುತ್ತಾರೆ. ಆದರೆ ಸಾಯಿ ನಗರದ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟಕಷ್ಟೆ, ಮಕ್ಕಳ ಮತ್ತು ಪಾಲಕರ ಆರ್ಥಿಕ ಪರಿಸ್ಥಿತಿಯನ್ನೇ ತಮ್ಮ ಬಂಡವಾಳವಾಗಿರಿಸಿಕೊಂಡಿರುವ ಶಿಕ್ಷಣ ಇಲಾಖೆ ಮತ್ತು ಮೊಬೈಲ್ ಕಂಪನಿ ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡದೇ ಮೊಬೈಲ್ ಟವರ್ ಅಳವಡಿಸಿದ್ದಾರೆ.
ಮಕ್ಕಳಿಗೆ ಮೊಬೈಲ್ ಟವರ್‌ಗಳಿಂದ ಹೊರಸೂಸುವ ವಿಕಿರಣಗಳ ಜೊತೆಗೆ ಟವರ್‌ಗೆ ಅಳವಡಿಸಲಾಗಿರುವ ಜನರೇಟರ್ ಸದ್ದಿನಿಂದಾಗಿ ವ್ಯಾಸಂಗದಲ್ಲಿ ಹಿಂದುಳಿಯಬೇಕಾದಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ದೂರ ಸಂಪರ್ಕ ಇಲಾಖೆ ರೂಪಿಸಿದ ನೂತನ ನಿರ್ದೇಶನ ಸೂತ್ರಗಳ ಅನ್ವಯ ಸ್ಥಳೀಯ ಸಂಸ್ಥೆಗಳಿಂದ ಮೊಬೈಲ್ ಟವರ್ ಸ್ಥಾಪನೆಗೆ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಇದರಲ್ಲಿ ಶಾಲೆ, ಆಸ್ಪತ್ರೆಗಳಿಂದ ನಿಗದಿತ ಅಂತರದಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಬೇಕು ಎಂದು ತಿಳಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ಮೊಬೈಲ್ ಟವರ್ ಬೇಡ ಎಂದು ರಾಜಸ್ಥಾನ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಅದು ಇನ್ನೂ ವಿಚಾರಣೆ ಹಂತದಲ್ಲಿದೆ.
ಒಟ್ಟಾರೆಯಾಗಿ ಖಾಸಗಿ ಮಾಲೀಕತ್ವದ ಕಟ್ಟಡಗಳ ಮೇಲೆ ಬಾಡಿಗೆ ಆಸೆಗಾಗಿ ಮೊಬೈಲ್ ಟವರ್ ಸ್ಥಾಪಿಸಲು ಅನುಮತಿಸಲಾಗುತ್ತದೆ ಎನ್ನುವುದು ಸರಿ ಎಂದು ಹೇಳಬಹುದಾದರೂ ಸರ್ಕಾರಿ ಶಾಲೆ ನಡೆಯುವ ಅದೂ ಬಡ ಮಕ್ಕಳೇ ಓದುವಂತಹ ಶಾಲೆಗಳ ಮೇಲೆ ಮೊಬೈಲ್ ಟವರ್ ಅಳವಡಿಸಿ ಅವರ ಬೌದ್ಧಿಕ ಬೆಳವಣಿಗೆ ಕುಂಠಿತವಾಗುವಂತೆ ಮಾಡುವುದು ಎಷ್ಟರಮಟ್ಟಿಗೆ ಸರಿ?.

ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement