ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಡಿಮಾನ್ಸ್ ಹಿಂದಿನ ಮುಖ್ಯ ಆಡಳಿತಾಧಿಕಾರಿ ಮೇಟಿ ಬಂಧನ

Lingaraj Badiger
Updated On : 12 Dec 2013, 11:35 am

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 11
ಮಾನಸಿಕ ರೋಗಿಗಳ ಚಿಕಿತ್ಸೆಗೆ ಬಳಸಬೇಕಾಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಡಿ ಇಲ್ಲಿನ ಮಾನಸಿಕ ರೋಗಿಗಳ ಆಸ್ಪತ್ರೆಯ (ಡಿಮಾನ್ಸ್) ಹಿಂದಿನ ಮುಖ್ಯ ಆಡಳಿತಾಧಿಕಾರಿ ಎಸ್.ಎಸ್. ಮೇಟಿ ಅವರನ್ನು ಮಂಗಳವಾರ ತಡರಾತ್ರಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಗೆ ಬರುವ ಹಣವನ್ನು ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳ ಜಂಟಿ ಖಾತೆಯಲ್ಲಿ ಇಡಬೇಕಾಗಿತ್ತು. ಆದರೆ, 2010ರಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಮೇಟಿ ಅವರು ರು. 88 ಲಕ್ಷವನ್ನು ತಮ್ಮ ಖಾತೆಯಲ್ಲಿ ಜಮಾ ಮಾಡಿಕೊಂಡಿದ್ದರು. ಈ ಕುರಿತು ಲೆಕ್ಕ ಪರಿಶೋಧನಾ ವರದಿ ಆರೋಪಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿ ಎಲ್ಲ ಮಾಹಿತಿಯನ್ನು ಇಲ್ಲಿನ ವಿಜಯ ಪಂಚಪ್ಪ ಆಂಡ್ ಕಂಪನಿ ಎನ್ನುವ ಅಕೌಂಟೆಂಟ್ಸ್ ಕಡೆಯಿಂದ ಹಿಂದಿನ ಲೆಕ್ಕಪರಿಶೋಧನೆ ನಡೆಸಿದ ಸದ್ಯದ ಆಡಳಿತಾಧಿಕಾರಿ ಶಿವಶಂಕರ ಪೋಳ್ ಸಂಪೂರ್ಣ ವರದಿ ಪಡೆದಿದ್ದರು ಎನ್ನಲಾಗಿದೆ.
ಮಾನಸಿಕ ರೋಗಿಗಳಿಗೆ ಬಂದ ಹಣವನ್ನು ಮೇಟಿ ಅವರು ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವ ಮೂಲಕ ರೋಗಿಗಳಿಗೆ ಸಲ್ಲಬೇಕಿದ್ದ ಹಣ ವ್ಯಯಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಮಂಗಳವಾರ ರಾತ್ರಿ ಉಪನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗದಗದಲ್ಲಿರುವ ಮೇಟಿಯವರ ಸ್ವಂತ ಮನೆಯಿಂದ ಬಂಧಿಸಿ ಕರೆತಂದಿದ್ದಾರೆ. ಅಲ್ಲದೆ, ಅವರ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 406, 409 ಮತ್ತು 420 ಪ್ರಕಾರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮುಖ್ಯ ಆಡಳಿತಾಧಿಕಾರಿ ಹೆಸರಿನಲ್ಲಿ ತೆಗೆದ ಖಾತೆಯಿಂದ 2011-12ರಲ್ಲಿ ರು. 80 ಲಕ್ಷ ತೆಗೆದುಕೊಳ್ಳಲಾಗಿದ್ದು, 2012-13ರಲ್ಲಿ ರು. 8 ಲಕ್ಷ ಖಾತೆಯಿಂದ ತೆಗೆಯಲಾಗಿದೆ. ಒಟ್ಟು ರು. 88 ಲಕ್ಷ ಅವ್ಯವಹಾರವಾಗಿದೆ ಎಂದು ಆ ಲೆಕ್ಕ ಪರಿಶೋಧಕರ ವರದಿಯಿಂದ ತಿಳಿದು ಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement