ತಾಪಂ ಆವರಣದಲ್ಲೇ ಅನಾಥವಾದ ಶಿಲೆ
ಕನ್ನಡಪ್ರಭ ವಾರ್ತೆ, ಕುಂದಗೋಳ, ಡಿ. 11
ಭಾರತೀಯ ಸಂಸ್ಕೃತಿಯಲ್ಲಿ ಶಿಲೆಗೊಂದು ರೂಪನೀಡಿ ಅದನ್ನು ಪೂಜಿಸಿ, ಆರಾಧಿಸುವ ನಾಡಿನಲ್ಲಿ ಕುಂದಗೋಳ ತಾಲೂಕು ಪಂಚಾಯಿತಿ ಆವರಣದಲ್ಲಿ ಸುಂದರವಾದ ಒಂದು ಕಲೆಯರಳಿದ ಶಿಲೆಯೊಂದು ಕಸದಲ್ಲಿ ಬಿದ್ದಿದ್ದರೂ ಯಾವೊಬ್ಬ ಅಧಿಕಾರಿ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಒಬ್ಬ ಶಿಲ್ಪಿ ಕಲ್ಲನ್ನು ಕೆತ್ತಬೇಕಾದರೆ ಎಷ್ಟೊಂದು ಜಾಗೃತವಾಗಿ ಕೆತ್ತಿ ಸಮಾಜಕ್ಕೆ ಅರ್ಪಿಸುತ್ತಾನೆ. ಅಂಥ ಶಿಲೆಗೆ ಇಲ್ಲಿ ಬೆಲೆಯೇ ಇಲ್ಲವೆ ಎಂಬಂತಾಗಿದೆ.
ಪ್ರತಿದಿನ ತಾಲೂಕು ಪಂಚಾಯಿತಿಗೆ ನೂರಾರು ಸಾರ್ವಜನಿಕರು ಓಡಾಡುತ್ತಿದ್ದು, ಅದರಲ್ಲೂ ವಿಶೇಷವಾಗಿ ತಾಲೂಕಿನ ಎಲ್ಲ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇವರೆಲ್ಲರಿಗೆ ಕಾಣುವಂತಿರುವ ಈ ಶಿಲೆ ಕಸದೊಂದಿಗೆ ಬಿದ್ದಿದ್ದರೂ ಯಾರೊಬ್ಬರೂ ಇದನ್ನೆತ್ತಿಟ್ಟು ಪೋಷಿಸಿಲ್ಲ. ದೇಶ-ವಿದೇಶಗಳಲ್ಲಿ ನಮ್ಮ ಭಾರತೀಯ ಕಲೆಯಲ್ಲರಳಿದ ಶಿಲೆಗಳನ್ನು ನೋಡಲು ವಿದೇಶಿಗರು ಬರುತ್ತಾರೆ. ಆದರೆ, ಇಲ್ಲಿ ಸೌಜನ್ಯಕ್ಕಾದರೂ ಶಿಲ್ಪ ಕಲೆಗಳನ್ನು ಒಂದೆಡೆ ಇಡಬೇಕಿತ್ತು. ಅನೇಕ ಸಾರ್ವಜನಿಕರು ತಮ್ಮ ತಮ್ಮಲ್ಲಿನ ಅಸಮಾಧಾನ ಹೊರ ಹಾಕಿ ಕಲಾ ಶಿಲೆಗಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಅನಾಥವಾಗಿ ಬಿದ್ದಿರುವ ಈ ಕಲಾಶಿರಿಯ ಶಿಲ್ಪವನ್ನು ಕಂಡು ಶಿಲ್ಪಿಗಳಿಗೆ ಅತ್ಯಂತ ನೋವೆನಿಸಿದ್ದು, ನಮ್ಮ ಕಲೆಯ ಪರಿಸ್ಥಿತಿ ಎಲ್ಲಿಯವರೆಗೆ ಬಂತಲ್ಲ ಎಂದು ಚಿಂತಿಸುವಂತಾಗಿದ್ದು, ಕಲಾ ಪೋಷಕರನ್ನು ಕೆರಳಿಸುವಂತೆ ಮಾಡಿದ್ದು, ಕಲೆಯ ಪೋಷಕರು ಯಾವುದೇ ಕಲೆ ಇರಲಿ, ಆ ಕಲೆಗೆ ತಕ್ಕದೊಂದು ಬೆಲೆ ಇರಬೇಕು.
ಎಲ್ಲರೂ ಅದನ್ನು ರಕ್ಷಿಸಿ ಪೋಷಿಸುವ ಕೆಲಸ ಮಾಡಬೇಕು. ಇದನ್ನೆಲ್ಲ ಹೊರತುಪಡಿಸಿ ತಾಲೂಕು ಪಂಚಾಯಿತಿ ತನ್ನ ದಿವ್ಯ ನಿರ್ಲಕ್ಷ್ಯದಿಂದ ಸುಂದರ ಕಲೆಯ ಶಿಲೆಯನ್ನು ಕಸದೊಂದಿಗೆ ಬಿಸಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಲಾವಿದರು ಮತ್ತು ಕಲಾಸಕ್ತರು ಕೆಂಡಮಂಡಲಾವಾಗುವಂತೆ ಮಾಡಿದೆ.
ಕಲಾವಿದರ ಈ ನೋವಿನ ಧ್ವನಿಯನ್ನು ಕಡಿಮೆಗೊಳಿಸಲು ಇನ್ನಾದರೂ ಬಿಸಾಡಿರುವ ಕಲೆಯ ಶಿಲೆಗೆ ಸ್ಥಾನವೊಂದನ್ನು ಕೊಟ್ಟು, ಮನ್ನಣೆ ನೀಡುವಲ್ಲಿ ತಾಲೂಕು ಪಂಚಾಯಿತಿ ಪ್ರಯತ್ನಿಸುವುದೆ ಕಾದು ನೋಡಬೇಕಿದೆ.
-ಶೀತಲ್ ಎಸ್. ಮುರಗಿ