ಕರಾಟೆ: ರಶ್ಮಿ ಕುಂದೂರ, ಸುಮಾ ಕುಂದೂರ ಆಯ್ಕೆ
ಕುಂದಗೋಳ: ಮೈಸೂರಿನಲ್ಲಿ ಈಚೆಗೆ ಜರುಗಿದ ಇಂಟರ್‌ನ್ಯಾಶನಲ್ ಶೋಟೋಕಾನ್ ಕರಾಟೆ ಅಸೋಸಿಯೋಶನ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಧಾರವಾಡದ ಜೆಎಸ್‌ಎಸ್ ಕಾಲೇಜಿವ ವಿದ್ಯಾರ್ಥಿನಿ ರಶ್ಮಿ ದಯಾನಂದ ಕುಂದೂರ ಮತ್ತು ಸುಮಾ ವಿವೇಕಾನಂದ ಕುಂದೂರ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕಯಾಗಿದ್ದಾರೆ. ಈ ವಿದ್ಯಾರ್ಥಿನಿಯರನ್ನು ರಮೇಶ ಸೊಲ್ಲಾಪುರ, ಡಾ. ಎನ್ ವಜ್ರಕುಮಾರ, ಡಾ. ಅಜೀತ ಪ್ರಸಾದ ರಜನಿ ದಾಸ, ಗುಡಗೇರಿ ಗ್ರಾಮಸ್ಥರು ಅಭಿನಂದಿಸಿದಾರೆ.
ಎನ್.ಬಿ. ಬಾಡದ ಆಯ್ಕೆ
ಕಲಘಟಗಿ: ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಗೌರವಾಧ್ಯಕ್ಷರಾಗಿ ತುಮರಿಕೊಪ್ಪ ಸಂತಝೆವಿಯರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎನ್.ಬಿ. ಬಾಡದ ಆಯ್ಕೆ ಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಕಾರ್ಯದರ್ಶಿ ನೇಮಕ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿ ಲೀಲಾವತಿ ಪಾಸ್ತೆ ಹಾಗೂ ಸುಜಾತಾ ಕಳ್ಳಿಮನಿ ನೇಮಕಗೊಂಡಿದ್ದಾರೆ. ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ ನೇಮಕ ಆದೇಶ ಹೊರಡಿಸಿದ್ದಾರೆ.
23ಕ್ಕೆ ವಿಚಾರ ಸಂಕಿರಣ
ಹುಬ್ಬಳ್ಳಿ: 'ಬಿಜಿನೆಸ್‌ಮನ್ ಆ್ಯಂಡ್ ಇನ್‌ಕಮ್‌ಟ್ಯಾಕ್ಸ್' ವಿಷಯ ಕುರಿತ ವಿಚಾರ ಸಂಕಿರಣವನ್ನು ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಡಿ. 23ರಂದು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಡಾ. ಕೆ. ಸತ್ಯನಾರಾಯಣ ಹಾಗೂ ಆದಾಯ ತೆರಿಗೆ ಇಲಾಖೆ ಆಯುಕ್ತ ಕೆ. ಗಣೇಶನ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಆದಾಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಪಿ.ಸಿ. ಚಡಗಾ ಹಾಗೂ ಆದಾಯ ತೆರಿಗೆ ಉಪ ಆಯುಕ್ತ ಕೆ.ಆರ್. ನಾರಾಯಣ ಅವರು ಉಪನ್ಯಾಸ ನೀಡುವರು. ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ಅಧ್ಯಕ್ಷತೆ ವಹಿಸುವರು. ಉದ್ದಿಮೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಗೂ ತೆರಿಗೆ ಕುರಿತ ಸಮಸ್ಯೆಗಳಿದ್ದಲ್ಲಿ ಡಿ. 21ರೊಳಗೆ ಸಂಸ್ಥೆಗೆ ಲಿಖಿತವಾಗಿ ಸಲ್ಲಿಸುವಂತೆ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ ತಿಳಿಸಿದ್ದಾರೆ.
ಹಂಪಿ ಉತ್ಸವದಲ್ಲಿ ವಿಕಲಚೇತನ ಕಲಾವಿದರಿಗೆ ಅವಕಾಶ ನೀಡಿ
ಹೊಸಪೇಟೆ: ಹಂಪಿ ಉತ್ಸವದಲ್ಲಿ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಸ್ಥಳೀಯ ವಿಕಲಚೇತನ ಕಲಾವಿದರನ್ನು ಪರಿಗಣಿಸುವಂತೆ ಒತ್ತಾಯಿಸಿ ವಿಕಲಚೇತನರ ಸಂಘಟನೆ ಮುಖಂಡರು ಸೋಮವಾರ ಎಸಿ ಪಿ. ಸುನೀಲ್‌ಕುಮಾರ್‌ಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಹಂಪಿ ಉತ್ಸವ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಉತ್ಸವದಲ್ಲಿ ಅಂಗವಿಕಲರ ಕ್ರೀಡಾಕೂಟ ಹಮ್ಮಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸೂಚಿಸಿದ್ದು, ಪ್ರತಿ ಬಾರಿ ಉತ್ಸವದಲ್ಲಿ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದ ಕಾರಣ ವಿಕಲಚೇತನರು ಹಂಪಿ ಉತ್ಸವ ನೋಡಲು ಆಗುತ್ತಿಲ್ಲ. ಎಷ್ಟೋ ಬಾರಿ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೆ ಪ್ರಯೋಜವಾಗಿಲ್ಲ. ಇಲ್ಲಿಯೇ ಹುಟ್ಟಿದ್ದರೂ ವಿಕಲಚೇತನರು ಈ ಹಂಪಿ ಉತ್ಸವದ ವೀಕ್ಷಣೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಬಾರಿಯ ಹಂಪಿ ಉತ್ಸವ ವೀಕ್ಷಣೆಗೆ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ವಿಕಲಚೇತನರು ಪ್ರತಿಭೆಯುಳ್ಳವವರಿದ್ದಾರೆ. ಇವರಿಗೆ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಪ್ರತಿ ಬಾರಿಯಂತೆ ಈ ಬಾರಿಯೂ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ಎನ್. ವೆಂಕಟೇಶ್, ಜಿ. ಅಂಜಿನಿ, ಹುಲುಗಪ್ಪ, ಪಾಂಡುನಾಯ್ಕ ಎಲ್., ಅಶೋಕ್‌ಕುಮಾರ್, ಅರುಣ್‌ಕುಮಾರ್, ಚಾಂದ್‌ಬಿ, ವೆಂಕಮ್ಮ, ಖಾಜಾಬಾನಿ, ಉದೇದಪ್ಪ, ರಾಜಾಸಾಬ್, ಜಿ. ರಾಜಶೇಖರ್, ರಘು, ನಾಗಮ್ಮ ಎಚ್ಚರಿಸಿದರು.