ಕಳಸಾ-ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ
ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ತಹಸೀಲ್ದಾರರ ಮೂಲಕ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ. ಜೆ. ಎಂ. ಪಾಂಚಾಲರಿಗೆ ಸೋಮವಾರ ಮನವಿ ಅರ್ಪಿಸಿದರು.
ಮಹಾದಾಯಿ ನದಿಯ 200 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ಈ ನದಿ ಗೋವಾ ರಾಜ್ಯದಲ್ಲಿ ಇಳಿಮುಖವಾಗಿ ಹರಿಯುತ್ತಿದ್ದು, ನೀರಾವರಿಗಾಗಲಿ ಅಥವಾ ಜಲ ವಿದ್ಯುತ್ ಉತ್ಪಾದನೆಗಾಗಲಿ ಬಳಕೆಯಾಗುತ್ತಿಲ್ಲ. ಅದರಲ್ಲಿಯೂ ಕೇವಲ 1.56 ಟಿಎಂಸಿಯಷ್ಟು ನೀರನ್ನು ಮಾತ್ರ ಗೋವಾ ಸರ್ಕಾರ ಉಪಯೋಗಿಸಿಕೊಳ್ಳುತ್ತಿದೆ. ಹೀಗಿರುವಾಗ ಕರ್ನಾಟಕ ಸರ್ಕಾರದ ಕುಡಿಯುವ ನೀರಿನ ಉದ್ದೇಶದ ಯೋಜನೆಗೆ ಅನಗತ್ಯವಾಗಿ ಗೋವಾ ಸರ್ಕಾರ ಅಡ್ಡಿಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ.
ಕಳಸಾ ಬಂಡೂರಿ ನಾಲಾ ಯೋಜನೆ ಉತ್ತಕ ಕರ್ನಾಟಕದ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಯೋಜನೆಯ ಪರಿಶೀಲನೆಗಾಗಿ ನೇಮಿಸಿದ ವಿಶೇಷಾಧಿಕಾರಿಗಳ ಸಮಿತಿಗೆ ನ್ಯಾಯಯುತ ಯೋಜನೆ ಪುರಸ್ಕರಿಸುವಂತೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿರುವ ಮನವಿ ಪತ್ರವನ್ನು ತಹಸೀಲ್ದಾರ ನಾಗಾವಿ ಅವರ ಮೂಲಕ ನ್ಯಾ. ಪಾಂಚಾಲರಿಗೆ ಸಲ್ಲಿಸಲಾಯಿತು. ನಿಯೋಗದಲ್ಲಿ ಸಂಸ್ಥೆ ಅಧ್ಯಕ್ಷ ವಸಂತ ಲದವಾ, ಉಪಾಧ್ಯಕ್ಷ ಕೆ.ಡಿ. ಕೊಟೇಕರ, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಎ.ಟಿ. ಪವಾರ, ಬ್ರಹ್ಮಕುಮಾರ ಬೀಳಗಿ, ಮೋಹನ ದೇಸಾಯಿ, ಸುಭಾಸ ಸವಣೂರ, ಮಹಾಂತೇಶ ಕಮತಗಿ, ನಾಗರಾಜ ಮಗಜಿಕೊಂಡಿ ಇದ್ದರು.