ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿರ್ಭಯಾ ಪ್ರಕರಣ ಮರುಕಳಿಸದಿರಲಿ

Lingaraj Badiger
Updated On : 17 Dec 2013, 12:11 pm

ಬಳ್ಳಾರಿ: ನವದೆಹಲಿಯಲ್ಲಿ ನಡೆದ ನಿರ್ಭಯಾಳ ಮೇಲಿನ ಅತ್ಯಾಚಾರ ಪ್ರಕರಣ ಮತ್ತೆಂದೂ ಸಮಾಜದಲ್ಲಿ ಮರುಕಳಿಸದಿರಲಿ ಹಾಗೂ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಎಐಎಂಎಸ್‌ಎಸ್, ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳ ನೂರಾರು ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ,  ಅಶ್ಲೀಲತೆಯ ಭೂತ ದಹನ ಮಾಡಿದರು.
ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷೆ ಮಂಜುಳಾ ಮಾತನಾಡಿ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳಿಗೆ ಮಾಧ್ಯಮಗಳಲ್ಲಿ, ಮೊಬೈಲ್ ಮತ್ತು ಅಂತರ್ಜಾಲದ ಮೂಲಕ ಲಭ್ಯವಾಗುವ ಅಶ್ಲೀಲತೆ, ಪ್ರಚೋದನೆಕಾರಿ ದೃಶ್ಯಗಳು ಪ್ರಮುಖ ಕಾರಣಗಳೆಂಬುದು ನಿರ್ವಿವಾದ. ಇದರಿಂದ ಹೆಚ್ಚುತ್ತ ಹೋಗುವ ಸಮಾಜದ ನೈತಿಕ ಅಧಃಪತನ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ಪರಿಗಣಿಸುವ ಮನೊಭಾವವನ್ನು ಸೃಷ್ಟಿಸುತ್ತದೆ. ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಆನಂದ ಪಡೆಯುವ ವಿಕೃತ ಮನಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಅಶ್ಲೀಲತೆಯ ಪ್ರಚಾರಕ್ಕೆ ಕಡಿವಾಣ ಹಾಕುವುದು ತುರ್ತು ಆವಶ್ಯಕತೆ ಎಂದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, ಕಳೆದ ವರ್ಷ ಡಿ. 16ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣ ನಡೆದು ಒಂದು ವರ್ಷ ಕಳೆಯಿತು. ಮರಣದ ನಂತರ ಹೋರಾಟದ ಜ್ಯೋತಿ ಬೆಳಗಿಸಿದ ನಿರ್ಭಯಾ, ಹೋರಾಟಗಾರರಿಗೆ ಸ್ಫೂರ್ತಿಯಾದಳು. ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಲು, ದೇಶದಲ್ಲಿ ಮತ್ತೆಂದೂ ನಿರ್ಭಯಾದಂತ ಪ್ರಕರಣ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ನಂತರ ಗೋಡೆಗಳಿಗೆ ಅಂಟಿಸಿದ ಅಶ್ಲೀಲ ಪೋಸ್ಟರ್‌ಗಳಿಗೆ ಸಂಘಟನೆಗಳ ಕಾರ್ಯಕರ್ತರು ಮಸಿ ಬಳೆದು ಆಕ್ರೋಶ ವ್ಯಕ್ತಪಡಿಸಿದರು. ಎಐಎಂಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಶಾಂತಾ, ಅಹಲ್ಯಾ, ಎಐಡಿಎಸ್‌ಒ ಗೋವಿಂದ್, ಸುರೇಶ್, ಎಐಡಿವೈಒ ಉಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement