ರಾಜಕೀಯ ಲೋಪ: ಮಾನವ ಹಕ್ಕು ಉಲ್ಲಂಘನೆ
ಧಾರವಾಡ: ಸಂಯುಕ್ತ ರಾಷ್ಟ್ರ ಸಂಘವು ಕಳೆದ 65 ವರ್ಷಗಳ ಹಿಂದೆಯೇ ಮಾನವ ಹಕ್ಕುಗಳನ್ನು ಘೋಷಿಸಿದೆ. ಒಪ್ಪಗೆಯ ಸಹಿ ಹಾಕಿದ ಭಾರತವು ಮಾನವ ಹಕ್ಕುಗಳ ರಕ್ಷಣೆಗೆ ವ್ಯವಸ್ಥೆ ಮಾಡಿದೆ. ಆದರೆ, ರಾಜಕೀಯ ವ್ಯವಸ್ಥೆಯ ಹಲವು ಲೋಪದಿಂದ ಮಾನವ ಹಕ್ಕುಗಳ ರಕ್ಷಣೆಯಾಗುತ್ತಿಲ್ಲ ಎಂದು ಧಾರವಾಡ ಪೊಲೀಸ್ ವೃತ್ತ ಇನ್ಸ್ಪೆಕ್ಟರ್ ಅನಿಲಕುಮಾರ ಹೇಳಿದರು.
ಇಲ್ಲಿನ ಸಾಧನಕೇರಿ ಬೇಂದ್ರೆ ಭವನದಲ್ಲಿ ನಡೆದ ಬೇಂದ್ರೆ ಸಾಹಿತ್ಯ-ಮಾನವ ಹಕ್ಕುಗಳ ಪ್ರಜ್ಞೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಆಳುವ ಶಕ್ತಿಗಳಲ್ಲಿರುವ ಸ್ವಾರ್ಥ, ಸಣ್ಣತನಗಳಿಂದಲೂ ಮುಖ್ಯವಾಗಿ ಪ್ರಜೆಗಳಲ್ಲಿರುವ ಅಜ್ಞಾನ, ಅಂಜಿಕೆ, ಹೊಣೆಗೇಡಿತನಗಳಿಂದಲೂ ಮಾನವ ಹಕ್ಕುಗಳ ಪ್ರತಿಪಾದನೆಯಾಗಲಿ, ಅನುಷ್ಠಾನವಾಗಲಿ ಕನಿಷ್ಠ ಮಟ್ಟಕ್ಕೂ ಏರಿಲ್ಲ. ಪ್ರಜ್ಞಾವಂತ ವ್ಯಕ್ತಿಗಳು, ಅಧಿಕಾರಿಗಳು, ಸಶಕ್ತ ನಾಗರಿಕರು ವೈಯಕ್ತಿಕ ಮಟ್ಟದಲ್ಲಿ ನ್ಯಾಯ-ನೀತಿಗಳ ಉನ್ನತ ಅರಿವಿನೊಂದಿಗೆ ವರ್ತಿಸುತ್ತ, ಇತರರನ್ನೂ ಜಾಗ್ರತಗೊಳಿಸುತ್ತ ಕರ್ತವ್ಯ ನಿರ್ವಹಿಸುವುದಕ್ಕೆ ಹಿಂಜರಿಯಬೇಕಿಲ್ಲ. ಆದರೆ ನಿರ್ವಹಣೆ ಅಸಾಧ್ಯವೆಂದು ಕೈಬಿಡಬೇಕಿಲ್ಲ ಎಂದರು. ಬೇಂದ್ರೆಯಂತಹ ವಿಶ್ವಕವಿಗಳು ಆಧುನಿಕ ಮಾನವನ ಕುರಿತು ಮಾಡಿದ ಚಿಂತನೆ ನಮಗೆಲ್ಲ ಧೈರ್ಯ, ವಿಶ್ವಾಸ ನೀಡುವಂತಿವೆ ಎಂದರು.
ಸ್ತ್ರೀ ವರ್ಗಕ್ಕೆ ಮೀಸಲಾದ ಪ್ರಜನನದ ಹಕ್ಕು, ಮಕ್ಕಳಿಗಾಗಿರುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ ಆರ್.ಎಲ್.ಎಸ್. ಕಾಲೇಜಿನ ಪ್ರಾಚಾರ್ಯ ಅಶೋಕ ಸಿಂಘೆ, ಶಿಕ್ಷಣದಲ್ಲಿ ಮಾನವ ಹಕ್ಕುಗಳ ಅಭ್ಯಾಸವನ್ನು ಅಳವಡಿಸಿ, ಶಿಕ್ಷಕ-ವಿದ್ಯಾರ್ಥಿ ವೃಂದದಿಂದಲೇ ಜಾಗೃತಿ ಕಾರ್ಯ ಆರಂಭಿಸುವುದರಿಂದ ಸಹನೀಯ ಮಾನವ ಸಮಾಜ ನಿರ್ಮಾಣವಾಗಲು ಸಾಧ್ಯ. ಈ ಸಂದರ್ಭದಲ್ಲಿ ಇತ್ತೀಚೆಗೆ ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಗೋಷ್ಠಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಧಾರವಾಡದ ವಿದ್ಯಾರ್ಥಿನಿ ಮಂಜುಳಾ ಮಹಾಂತೇಶ ಮುನವಳ್ಳಿಯವರನ್ನು ಬೇಂದ್ರೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಳೆದ ತಿಂಗಳು ಸಾಧನಕೇರಿಯಲ್ಲಿ ಏರ್ಪಡಿಸಿದ್ದ ಬೇಂದ್ರೆ ಭಾವಚಿತ್ರ-ಕಾವ್ಯಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.
ಬಾಳಣ್ಣ ಶೀಗೀಹಳ್ಳಿ, ಶ್ರೀಧರ ಹೆಗಡೆ ಭದ್ರನ್, ನ.ರವಿಕುಮಾರ, ರಾಮಚಂದ್ರ ಧೋಂಗಡಿ, ಜಿ. ಬಿ. ಹೊಂಬಳ, ವಸಂತ ವಾಯಿ, ದೀಪಕ ಆಲೂರ, ಅಶೋಕ ಜೋಶಿ, ಜನಾರ್ದನ ನಾಯಕ, ಎಂ.ಆರ್. ಬಾಳಿಕಾಯಿ, ರಾಜಶೇಖರ ಮಾಣಿಕ್ಯಂ, ವಲಿಮಹಮ್ಮದ್ ಧಾರವಾಡ ಇದ್ದರು. ಅಂಜಲಿ ಮೆಹಂದಳೆ ಪ್ರಾರ್ಥಿಸಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಮಾತಾಡಿದರು. ನರಸಿಂಹ ಪರಾಂಜಪೆ ವಂದಿಸಿದರು.