ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಗಜೇಂದ್ರಗಡ: ಸಿಇಟಿ ಮೂಲಕವೇ ವೃತ್ತಿ ಶಿಕ್ಷಣ ಸೀಟು ಹಂಚಿಕೆ ಜತೆಗೆ ಶುಲ್ಕ ನಿಗದಿ ಸೇರಿದಂತೆ ಸರ್ಕಾರಿ ಕಾಲೇಜ್ಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಪದವಿ ಪೂರ್ವ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ನಗರ ಸಮಿತಿ ಉಪಾಧ್ಯಕ್ಷ ಶಿವಾನಂದ ಭೋಸಲೆ ಮಾತನಾಡಿ, ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಇಡಿ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಸರ್ಕಾರ ಹೊರಟಿದೆ. ಕಾಯ್ದೆಯನ್ನು ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ವೃತ್ತಿ ಶಿಕ್ಷಣ ವಿದ್ಯಾರ್ಥಿಗಳ ಕನಸಿಗೆ ತಣ್ಣೀರೆರಚಲು ಹೊರಟಿದೆ ಎಂದು ದೂರಿದರು.
ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್ಗಳ ಶುಲ್ಕವನ್ನು ಹೆಚ್ಚಿಸುವುದರ ಜತೆಗೆ ಖಾಸಗಿ ಕಾಲೇಜುಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿರುವುದರಿಂದ ಲಕ್ಷಾಂತರ ದಲಿತ, ಹಿಂದುಳಿದ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿ ್ಥಗಳಿಗೆ ಘೋರ ಅನ್ಯಾಯವೆಸಗುವುದರ ಜತೆಗೆ ಕಾಯ್ದೆಯಲ್ಲಿ ಯಾವುದೇ ತಪ್ಪುಗಳಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಬೂಬು ಹೇಳುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವರ ನಡೆ ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಕಾರ್ಯದರ್ಶಿ ಶಿವಾಜಿ ಗಡ್ಡದ ಮಾತನಾಡಿ, ಬಡ ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗುವ ನೀತಿ ಕೈಬಿಟ್ಟು, ವಿದ್ಯಾರ್ಥಿಗಳ ಹಿತ ಕಾಪಾಡಲು ಮುಂದಾಗಬೇಕು. ಸರ್ಕಾರಿ ಸಿಇಟಿ ಮೂಲಕವೇ ವೃತ್ತಿ ಶಿಕ್ಷಣ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿ ಮಾಡಬೇಕು. ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು ಕೈಬಿಡಬೇಕು.
ಸರ್ಕಾರಿ ಸೀಟುಗಳ ಸಂಖ್ಯೆಯನ್ನು 75.25 ಅನುಪಾತದಲ್ಲಿರಬೇಕು. ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಿಗೆ ಅತ್ಯಾಧುನಿಕ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು ಎಂದರು.
ಇದಕ್ಕೂ ಮುನ್ನ ಸರ್ಕಾರಿ ಪಿಯು ಕಾಲೇಜ್ನಿಂದ ವಿಶೇಷ ತಹಸೀಲ್ದಾರ್ ಕಾರ್ಯಾಲಯದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಕಾಶ ಹೆಳವರ, ಬಾಲಕೃಷ್ಣ ಜಾಡಬಂಡಿ, ರಾಮು ರಾಠೋಡ, ಶರಣಯ್ಯ ಸೂಗೀರಯ್ಯನಮಠ, ಲಕ್ಷ್ಮಿಕಾಂತ ಕಲಾಲ, ಶ್ರೀಧರ ಮಲಕೊಜಿ, ಇತರರು ಪಾಲ್ಗೊಂಡಿದ್ದರು.