ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅನುದಾನ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರ

Mainashree
Updated On : 19 Dec 2013, 10:35 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 18
ಅವಳಿನಗರದ ಅಭಿವೃದ್ಧಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ 2ನೇ ಹಂತದಲ್ಲಿ ಮಂಜೂರು ಮಾಡಿದ್ದ ರು. 100 ಕೋಟಿ ಅನುದಾನವನ್ನು ಹಾಲಿ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡದಿದ್ದರಿಂದ ಮಹಾನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬ್ರೇಕ್ ಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಎರಡನೇ ಹಂತದ ರು. 100 ಕೋಟಿ ಬಿಡುಗಡೆ ಸೇರಿದಂತೆ ಅವಳಿನಗರದಲ್ಲಿ ತ್ವರಿತಗತಿಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ವಾರದಲ್ಲೇ ಬೆಂಗಳೂರಿನಲ್ಲಿ ಹು-ಧಾ ಮಹಾನಗರದ ಶಾಸಕರೊಂದಿಗೆ ಚರ್ಚಿಸಿ ರಾಜಕೀಯ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಗೋಷ್ಠಿಯುದ್ದಕ್ಕೂ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ ಅವರು ಒಟ್ಟಾರೆ ಹೇಳಿದ್ದಿಷ್ಟು: ಒಂದನೇ ಹಂತದ ರು. 100 ಕೋಟಿ ಸಂಪೂರ್ಣ ಹಣ ಬಿಡುಗಡೆಯಾಗಿದ್ದು ಈ ಪೈಕಿ ಧಾರವಾಡದ ಕನ್‌ವೆಶನ್ ಸೆಂಟರ್ ಶೀಫ್ರದಲ್ಲೇ ಕಾರ್ಯಾರಂಭ ಮಾಡಲಿದೆ. 2ನೇ ಹಂತದ 100 ಕೋಟಿಯಲ್ಲಿ ಪಾಲಿಕೆ ಈವೆರೆಗೂ ಬಂದಿದ್ದು ರು. 46 ಕೋಟಿ. ಇದರಿಂದಾಗಿ ವರ್ಕ್ ಆರ್ಡರ್ ಆಗಿದ್ದರೂ ಗುತ್ತಿಗೆದಾರರ ಕೆಲಸ ನಿರ್ವಹಿಸುತ್ತಿಲ್ಲ. 2012-13ನೇ ಸಾಲಿನಲ್ಲಿ ರು. 26.88 ಕೋಟಿ ಎಸ್‌ಎಫ್‌ಸಿ ಅನುದಾನ ಪಾಲಿಕೆಗೆ ಬರಬೇಕಿತ್ತು. ಆದರೆ, ಈ ಪೈಕಿ ರು. 12.48 ಕೋಟಿ ಮಾತ್ರ ಸಂದಾಯವಾಗಿದೆ.
ಪ್ರಸಕ್ತ ವರ್ಷದ ರು. 24.79 ಕೋಟಿ ಎಸ್‌ಎಫ್‌ಸಿ ಅನುದಾನದ ಪೈಕಿ ರು. 12.29 ಕೋಟಿ ಮಾತ್ರ ಬಂದಿದ್ದು ಇನ್ನೂ ರು. 24 ಕೋಟಿ ಬರಬೇಕಿದೆ. ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ಮಹಾನಗರದ ಅಭಿವೃದ್ಧಿಗೆ ರು. 9 ಕೋಟಿಯ ವಿಶೇಷ ಪ್ಯಾಕೇಜ್ ನೀಡಿದ್ದೇವು. ಆದರೆ ಈ ಹಣ ಈವರೆಗೂ ಬಿಡುಗಡೆಯಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ತಾವು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ವಾರದಲ್ಲಿ ಹಣ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದಾರಾದರೂ ಆ ಮಾತಿನಲ್ಲಿ ತಮಗೆ ಭರವಸೆ ಇಲ್ಲ. ಆದ್ದರಿಂದ ಪಾಲಿಕೆಗೆ ಬರಬೇಕಾಗಿರುವ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಸೂಚನೆ: ಮಹಾನಗರದಾದ್ಯಂತ ನಡೆದಿರುವ ಯುಜಿಡಿ ಕಾಮಗಾರಿಯಿಂದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಈ ಪೈಕಿ 14 ಪ್ರಮುಖ ರಸ್ತೆಗಳನ್ನು ಪಾಲಿಕೆ ಗುರುತಿಸಿದ್ದು ಇದಕ್ಕೆ ಬೇಕಾಗುವ ಅವಶ್ಯಕ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ತಕ್ಷಣಕ್ಕೆ ಆರಂಭಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಘನತ್ಯಾಜ್ಯ ವಸ್ತುಗಳ ವಿಲೇವಾರಿಯೂ ಸರಿಯಾಗಿ ಆಗುತ್ತಿಲ್ಲ. ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಬಿಆರ್‌ಟಿಎಸ್ ಹಾಗೂ ಕೆಆರ್‌ಡಿಸಿಎಲ್ ನಡುವೆ ಇರುವ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದಲ್ಲದೇ, ರು. 30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಈ ರಸ್ತೆಗಳ ಡಾಂಬರೀಕರಣ ಕಾರ್ಯಕ್ಕೆ ರು. 9 ಕೋಟಿ ಬಿಡುಗಡೆಗೊಳಿಸಿ ತುರ್ತು ಕಾಮಗಾರಿ ಆರಂಭಿಸುವುದಾಗಿ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ ಎಂದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ಮಹೇಶ ಬುರ್ಲಿ, ಡಿ.ಕೆ. ಚವ್ಹಾಣ ಗೋಷ್ಠಿಯಲ್ಲಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement