ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಡವರ ಅಗ್ಗದ ಅಕ್ಕಿಗೆ ಹುಳು ಭಾಗ್ಯ

Mainashree
Updated On : 19 Dec 2013, 10:37 am

ಉಪ್ಪಿನ ಬೆಟಗೇರಿ (ಧಾರವಾಡ): ಅಗ್ಗದ ದರದಲ್ಲಿ ಬಡವರ ಹೊಟ್ಟೆ ತುಂಬಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ಅನ್ನಭಾಗ್ಯ' ಯೋಜನೆ ಬಡವರ ಪಾಲಿಗೆ 'ದೌರ್ಭಾಗ್ಯ' ಯೋಜನೆಯಾಗಿ ಪರಿಣಮಿಸಿದೆ!
ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ವಿತರಿಸುವ ತರಾತುರಿಯಲ್ಲಿ ಹುಳಹತ್ತಿದ ಅಕ್ಕಿ ವಿತರಿಸಲಾಗುತ್ತಿದೆ. ಧಾರವಾಡ ಜಿಲ್ಲೆಗೆ ಡಿಸೆಂಬರ್ ತಿಂಗಳ ಪಡಿತರ ವಿತರಣೆಗೆ ಪೂರೈಕೆಯಾದ ಅಕ್ಕಿಗೆ ಹುಳ ಹತ್ತಿದ್ದು ಸಂಪೂರ್ಣ ಗಂಟಿಕ್ಕಿದೆ. ಇಂಥದೇ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿ, ಸೊಸೈಟಿಗಳ ಮೂಲಕ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ, ತಡಕೋಡ, ಅಮ್ಮಿನಬಾವಿ, ನರೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬಡ ಜನತೆ ಅನಿವಾರ್ಯವಾಗಿ ಈ ಕಳಪೆ ಅಕ್ಕಿಯನ್ನುಪಡೆದಿದ್ದಾರೆ.
ಗೋದಾಮಿನಲ್ಲಿರುವ ಅಕ್ಕಿ ಚೀಲಗಳಲ್ಲಿನ ಅಕ್ಕಿ ಗಂಟಿಕ್ಕಿ ಹುಳು ಹಿಡಿದಿದ್ದರೂ ನಾಗರಿಕ ಆಹಾರ ಸರಬರಾಜು ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇಲಾಖೆ ಹಲವು ಹಂತಗಳಲ್ಲಿ ಗುಣಮಟ್ಟ ಪರಿಶೀಲಿಸಿದರೂ ಇಂಥ ಕಳಪೆ ಗುಣಮಟ್ಟದ ಅಕ್ಕಿ ವಿತರಣೆಯಾಗುತ್ತಿದೆ.
ಅಧಿಕಾರಿಗಳ ಉಢಾಪೆ ಉತ್ತರ: ನಿತ್ಯ ಕಳಪೆ ಗುಣಮಟ್ಟದ ಅಕ್ಕಿ ಉಣ್ಣುತ್ತಿರುವ ಬಡ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಜನ ಅಕ್ಕಿ ವಿತರಣೆ ಮಾಡುವ ನ್ಯಾಯ ಬೆಲೆ ಅಂಗಡಿಯವರನ್ನು ಪ್ರಶ್ನಿಸಿದರೆ ಉಢಾಪೆ ಉತ್ತರ ನೀಡುತ್ತಿದ್ದಾರೆ. 'ನಾವೇನ್ ಮಾಡುನ್ರಿ, ನಮ್ ಕೈಯ್ಯಾಗೇನೈತಿ. ಮ್ಯಾಲಿಂದ ಎಂಥಾ ಅಕ್ಕಿ ಬರತೈತಿ ಹಂತಾದ ಕೊಡ್ತೆವಿ. ನೀವೇನ್ ಕೇಳುದಿದ್ರೂ ಮ್ಯಾಲಿನ ಅಧಿಕಾರಿಗೋಳನ್ನ ಕೇಳೊಗ್ರಿ' ಅಂತ ದಬಾಯಿಸುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳನ್ನು ವಿಚಾರಿಸಿದರೆ, 'ಸರ್ಕಾರದಿಂದ ಪೂರೈಸಿದ ಅಕ್ಕಿ ನಾವು ಸರಬರಾಜು ಮಾಡುತ್ತೇವೆ' ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಪ್ರತಿ ತಿಂಗಳು 11,296 ಕ್ವಿಂಟಲ್ ಅಕ್ಕಿ: ಧಾರವಾಡ ತಾಲೂಕಿನಲ್ಲಿ ಒಟ್ಟು 86 ನ್ಯಾಯಬೆಲೆ ಅಂಗಡಿಗಳಿದ್ದು, 39,940 ಬಿಪಿಎಲ್ ಹಾಗೂ 7,073 ಅಂತ್ಯೋದಯ ಕಾರ್ಡ್‌ಗಳು ಸೇರಿದಂತೆ ಒಟ್ಟು 47,013 ಕಾರ್ಡ್‌ಗಳಿವೆ. ಈ ಎಲ್ಲ ಕಾರ್ಡ್‌ಗಳಿಗೆ ಪ್ರತಿ ತಿಂಗಳು 11,296 ಕ್ವಿಂಟಲ್ ಅಕ್ಕಿ ಪೂರೈಕೆಯಾಗುತ್ತಿದೆ.
ಡಿಸೆಂಬರ್‌ನಲ್ಲಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಗಂಟುಗಂಟಾದ, ಹುಳು ಹತ್ತಿದ ಅಕ್ಕಿ ಪೂರೈಕೆಯಾಗಿದೆ. ಗ್ರಾಮೀಣ ಪಡಿತರದಾರರು ಇಂಥ ಅಕ್ಕಿಯನ್ನು ಪಡೆದರೆ ಒಂದೆಡೆ ಆರೋಗ್ಯ ಹಾಳು. ಪಡೆಯದೇ ಇದ್ದರೆ ಇನ್ನೊಂದೆಡೆ ಅನ್ನವಿಲ್ಲದೇ ಗೋಳಾಡಬೇಕಾದ ಪರಿಸ್ಥಿತಿ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ.
ಕಳಪೆ ಅಕ್ಕಿ ಬಗ್ಗೆ ಇವತ್ತಿನವರೆಗೂ ಯಾವ ದೂರುಗಳೂ ಬಂದಿಲ್ಲ. ಒಂದು ವೇಳೆ ಗಂಟಿಕ್ಕಿದ ಅಕ್ಕಿ ಬಂದರೆ ಅವುಗಳನ್ನು ಗ್ರಾಹಕರಿಗೆ ವಿತರಿಸಬೇಡಿ ಎಂದು ಮುಂಚೆಯೇ ಸೂಚಿಸಿದ್ದೇವೆ. ಆ ಚೀಲವನ್ನು ಗೋದಾಮಿಗೆ ನೀಡಿ ಉತ್ತಮ ಅಕ್ಕಿ ಪಡೆಯುವುದು ನ್ಯಾಯಬೆಲೆ ಅಂಗಡಿ ಮಾಲೀಕರ ಕರ್ತವ್ಯ.
- ಕಲ್ಲನಗೌಡರ
ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕ
ನಮಗೆ ಸರಬರಾಜಾದ ಅಕ್ಕಿಯನ್ನು ಜನರಿಗೆ ವಿತರಿಸುವುದಷ್ಟೇ ನಮ್ಮ ಕೆಲಸ. ಅಕ್ಕಿಯ ಗುಣಮಟ್ಟ, ಸ್ವಚ್ಛತೆ ಮುಂತಾದವುಗಳನ್ನು ಅಹಾರ ಇಲಾಖೆಯ ಅಧಿಕಾರಿಗಳು ಪರಿಶೀಲಿಸಬೇಕು. ಪರಿಶೀಲನೆ ಬಳಿಕವೂ ಕೆಲವೊಮ್ಮೆ ಗಂಟಿಕ್ಕಿದ ಅಕ್ಕಿ ಬಂದರೆ ಅವುಗಳನ್ನು ಗೋದಾಮಿಗೆ ಮರಳಿ ಕಳುಹಿಸುತ್ತೇವೆ.
- ಜಿ.ಆರ್. ಜವಳಗಿ
ಉಪ್ಪಿನ ಬೆಟಗೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ

ಪ್ರಕಾಶ ಹೂಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement