ಸಿಇಟಿ ಕಾಯ್ದೆ ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಧಾರವಾಡ: ರಾಜ್ಯ ಸರ್ಕಾರದ ಸಿಇಟಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಬುಧವಾರ ಇಲ್ಲಿನ ಜ್ಯುಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಗರದ ಕಲಾಭವನದಿಂದ ಹೊರಟು ಆರ್‌ಎಲ್‌ಎಸ್, ಕಿಟೆಲ್ ಹಾಗೂ ಸೆಂಟ್ ಜೋಸೆಫ್ ಕಾಲೇಜಿನ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ಜ್ಯುಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಗರ ಕಾರ್ಯದರ್ಶಿ ಹರ್ಷ ಭಟ್ ಮಾತನಾಡಿ, ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ಕಾಯ್ದೆಯಿಂದ ಎಂಜಿನಿಯರಿಂಗ್‌ನ ಶೇ. 45, ಮೆಡಿಕಲ್‌ನ ಶೇ. 40 ಹಾಗೂ ದಂತ ವೈದ್ಯಕೀಯ ಶೇ. 35 ಸೀಟ್‌ಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟ್‌ಗಳು ಇಲ್ಲದಂತಾಗುತ್ತದೆ. ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್-ಕೆ ನಡೆಸುವ ಪ್ರವೇಶ ಪರೀಕ್ಷೆ ಬಗ್ಗೆ ಈಗಾಗಲೇ ಹಲವಾರು ದೂರುಗಳಿದ್ದು, ಈ ಸಂದರ್ಭದಲ್ಲಿ ಸರ್ಕಾರ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್-ಕೆ ಗೆ ಬಿಟ್ಟುಕೊಡುತ್ತಿರುವುದು ಖಂಡನೀಯ. ಇದರಿಂದ ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುಕೂಲವಾದಂತಾಗುತ್ತದೆ ಎಂದು ಆರೋಪಿಸಿದರು. ಕಾರ್ಯಕರ್ತರಾದ ಜಗದೀಶ ಮಾನೆ, ಶರೀಫ್, ಮಂಜುನಾಥ ಧಾರವಾಡ, ಯಾಸೀನ್, ವಿಜಯ, ವಿನಯ, ಶ್ರೀಕಾಂತ, ಆಕಾಶ, ಪ್ರವೀಣ ಬೇಲೂರ ಮತ್ತಿತರರು ಇದ್ದರು.